ಶಿವಮೊಗ್ಗಕ್ಕೆ ಆಗಮಿಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಅದ್ದೂರಿ ಸ್ವಾಗತ

0 161

ಶಿವಮೊಗ್ಗ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತು.


ನಿನ್ನೆ ರಾತ್ರಿ ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಇಂದು ಮುಂಜಾನೆ ಶಿವಮೊಗ್ಗಕ್ಕೆ ಆಗಮಿಸಿದ ವಿಜಯೇಂದ್ರ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮುಗಿಲುಮುಟ್ಟುವಂತೆ ಹರ್ಷೋದ್ಗಾರ ಹಾಕಿದ್ದು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಾಹನದಲ್ಲಿ ವಿಜಯೇಂದ್ರ ಅವರೊಂದಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಹರತಾಳು ಹಾಲಪ್ಪ, ಡಾ. ಸುರೇಶ್, ರಮೇಶ್ ಮತ್ತು ಎಚ್.ಆರ್. ತೀರ್ಥೇಶ್ ಸೇರಿದಂತೆ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪೂರ್ಣ ಕುಂಭದೊಂದಿಗೆ ಸ್ವಾಗತ :
ಇಂದು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿದ ವಿಜಯೇಂದ್ರ ಅವರನ್ನು ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಪೂರ್ಣ ಕುಂಭದೊಂದಿಗೆ ಸ್ವಾಗತ ಕೋರಿದರು.
ಅದ್ಧೂರಿ ಬೈಕ್ ರ‍್ಯಾಲಿ ಬೆಕ್ಕಿನಕಲ್ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ನಂತರ ವಿಜಯೇಂದ್ರ ಅವರನ್ನು ತೆರೆದ ವಾಹನದಲ್ಲಿ ಬೈಕ್, ಕಾರ್ ರ‍್ಯಾಲಿಯೊಂದಿಗೆ ಪೆಸಿಟ್ ಕಾಲೇಜಿಗೆ ಕರೆತರಲಾಯಿತು. ಬೆಕ್ಕಿನಕಲ್ಮಠದಲ್ಲಿ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರ ಹಾಕಲಾಯಿತು. ಪೆಸಿಟ್ ಕಾಲೇಜಿನ ಸಭಾಂಗಣಕ್ಕೆ ಬರುತ್ತಿದ್ದಂತೆ ಮಂಗಳ ವಾದ್ಯ ಮೊಳಗಿಸಲಾಯಿತು. ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

ಬಿಜೆಪಿ ಕಚೇರಿ ರಸ್ತೆಯಲ್ಲಿ ಅದ್ದೂರಿ ಸ್ವಾಗತ ಕೋರಿದ ವೇಳೆ ಕರಾವಳಿಯ ಪ್ರಖ್ಯಾತ ಚಂಡೆ ವಾದ್ಯ ಹೆಚ್ಚಿನ ಮೆರುಗು ನೀಡಿತ್ತು. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಸಾವಿರಾರು ಕಾರ್ಯಕರ್ತರ
ಹರ್ಷೋದ್ಗಾರ ಮುಗಿಲುಮುಟ್ಟಿತ್ತು.

ಮುಂಬರುವ ಲೋಕಸಭಾ ಚುನಾವಣೆ ನಮ್ಮ ಸವಾಲಾಗಿದೆ. ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬಲಪಡಿಸಬೇಕಿದೆ. ಅದಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಿದೆ. ಎಲ್ಲರೂ ಒಂದಾಗಿ ಪಕ್ಷವನ್ನು ಇನ್ನಷ್ಟು ಬಲವಾಗಿ ಸಂಘಟಿಸಬೇಕಿದೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳೂ ಗೆಲುವು ಸಾಧಿಸುವಂತೆ ಪ್ರತಿಯೊಬ್ಬರೂ ಶ್ರಮಿಸಬೇಕು.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಹಲವರು ಇದ್ದರು.

ನಗರದ ಬೆಕ್ಕಿನಕಲ್ಮಠದಿಂದ ಪೆಸಿಟ್ ಕಾಲೇಜ್‌ ವರೆಗೆ ನಡೆದ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಧರಿಸಿರಲಿಲ್ಲ. ಕೆಲವೇ ಕೆಲವರು ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಪಾಲಿಸಿದ್ದರು. ಉಳಿದಂತೆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಹೆಲ್ಮೆಟ್ ಇಲ್ಲದೇ ಬೈಕ್‌ ಓಡಿಸಿದರು. ಇದನ್ನು ಕಂಡು ಕಾಣದಂತೆ ಪೊಲೀಸರಿದ್ದರು.

Leave A Reply

Your email address will not be published.

error: Content is protected !!