ಸತ್ಯಶೋಧನಾ ಹೆಸರಲ್ಲಿ ರಾಜಕಾರಣಿಗಳು ಹೊರಗಿನಿಂದ ರಾಗಿಗುಡ್ಡಕ್ಕೆ ಬಂದು ವಾತಾವರಣವನ್ನು ಮಲಿನಗೊಳಿಸುವುದು ಬೇಡ ; ಆಯನೂರು

0 102

ಶಿವಮೊಗ್ಗ: ಸತ್ಯಶೋಧನಾ ಹೆಸರಲ್ಲಿ ರಾಜಕಾರಣಿಗಳು ಹೊರಗಿನಿಂದ ರಾಗಿಗುಡ್ಡಕ್ಕೆ ಬಂದು ವಾತಾವರಣವನ್ನು ಮಲಿನಗೊಳಿಸುವುದು ಬೇಡ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಪರೋಕ್ಷವಾಗಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಸ್ಥಳೀಯ ಎಲ್ಲಾ ಪಕ್ಷದ ನಾಯಕರು ಇಲ್ಲಿ ಸಂಯಮ ಕಾಪಾಡಿಕೊಂಡಿದ್ದಾರೆ. ಹಿಂದೂ-ಮುಸ್ಲಿಂ ಯಾರೂ ಕೂಡ ಘಟನೆಯನ್ನು ಬೆಂಬಲಿಸಿಲ್ಲ. ಆದರೆ, ಹೊರಗಿನಿಂದ ಇಲ್ಲಿಗೆ ಸಾಂತ್ವನ ಹೇಳಲು ಬಂದವರು ವಾತಾವರಣ ಪ್ರಕ್ಷುಬ್ಧಗೊಳಿಸಿದ್ದಾರೆ ಎಂದು ಆರೋಪಿಸಿದರು.

ಹೊರಗಿನಿಂದ ಬಂದ ಬಿಜೆಪಿ ನಾಯಕರು ಆಯುಧ ಪೂಜೆಗೆ ಶಸ್ತ್ರಗಳನ್ನು ಪೂಜೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ನಮಗೂ ಕತ್ತಿ ಹಿಡಿಯಲು ಬರುತ್ತೆ ಎಂದೆಲ್ಲಾ ಹೇಳಿದ್ದಾರೆ. ಆಯುಧ ಪೂಜೆ ಸಂದರ್ಭದಲ್ಲಿ ತಲ್ವಾರ್ ಪೂಜೆ ಮಾಡಿ ಎಂದು ಕರೆ ನೀಡಿದ್ದಾರೆ. ಇವು ಸಾಂತ್ವನದ ಮಾತುಗಳೇ? ಎಂದು ಪ್ರಶ್ನೆ ಮಾಡಿದರು.

ಹೀಗೆ ಮಾತನಾಡಿದವರು ತಮ್ಮ ಮಕ್ಕಳ ಕೈಗೆ ಕತ್ತಿ ಕೊಡಲಿ. ಕಂಡವರ ಮಕ್ಕಳಿಗೆ ಕೊಡುವುದು ಬೇಡ. ರಾಜಕಾರಣಿಗಳು ತಮ್ಮ ಮಕ್ಕಳಿಗೆ ಎಂದೂ ಕತ್ತಿ ಕೊಡುವುದಿಲ್ಲ. ಪ್ರತಿಭಟನೆಗೆ ಕರೆ ತರುವುದಿಲ್ಲ. ಇದಕ್ಕೆ ಬಲಿಯಾಗುವವರು ಬಡವರ ಮಕ್ಕಳೇ. ಬಡವರ ಮಕ್ಕಳ ಕೈಯಲ್ಲಿ ಕತ್ತಿ ಹಿಡಿಸುತ್ತಾರೆ. ಇಂತಹ ಮಾತುಗಳಿಂದ ಸಾಧನೆಯಾದರೂ ಏನು? ಎಂದು ಪ್ರಶ್ನಿಸಿದರು.

ನಗರದಲ್ಲಿ 35 ವಾರ್ಡ್‌ಗಳಿವೆ. 13 -14 ವಾರ್ಡ್‌ಗಳಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲಿ ಎಲ್ಲೂ ಗಲಾಟೆ ಆಗಿಲ್ಲ. ಅದರಲ್ಲಿ ರಾಗಿಗುಡ್ಡ ವಾರ್ಡ್ 8ನೇ ಕ್ರಾಸ್ನಲ್ಲಿ ಮಾತ್ರ ಗಲಾಟೆ ಆಗಿದೆ. ಘಟನೆಯನ್ನು ನಾವೆಲ್ಲರೂ ಖಂಡಿಸಲೇಬೇಕು. ಹೊರಗಡೆಯಿಂದ ಬಂದವರು 8ನೇ ಕ್ರಾಸ್ ಗಲಾಟೆಯನ್ನು 800 ಕ್ರಾಸ್ ಗಳಿಗೆ ಹಬ್ಬಿಸಲು ಪ್ರಯತ್ನ ಮಾಡಬಾರದು ಎಂದರು.

ಎಲ್ಲರೂ ಜವಾಬ್ದಾರಿಯಿಂದ ಮಾತಾಡುವುದು ಕಲಿಯಬೇಕು. ನನಗೆ ಈ ಘಟನೆ ಪೂರ್ವ ನಿಯೋಜಿತ ಸಂಚು ಎನಿಸುವುದಿಲ್ಲ. ಅಂದು ಮೆರವಣಿಗೆಯಲ್ಲಿ 50-60 ಸಾವಿರ ಜನರು ಭಾಗವಹಿಸಿದ್ದರು. ಅಲ್ಲಿ ಎಲ್ಲಿಯೂ ಗಲಾಟೆ ಆಗಿಲ್ಲ. ರಾಗಿಗುಡ್ಡದಲ್ಲಿ ಆಗಿರುವುದು ಪುಂಡ ಪೋಕರಿಗಳ ಗಲಾಟೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತಿ ಕಾಪಾಡಲು ಪೂರ್ಣ ಶ್ರಮ ಹಾಕಿದ್ದಾರೆ. ಟೀಕೆ ಮಾಡಿ ಅವರ ಮನೋಸ್ಥೈರ್ಯ ಕಳೆಯಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಧೀರರಾಜ್ ಹೊನ್ನವಿಲೆ, ವೈ.ಹೆಚ್.ನಾಗರಾಜ್, ರಮೇಶ್ ಶೆಟ್ಟಿ ಶಂಕರಘಟ್ಟ, ಹಿರಣ್ಣಯ್ಯ, ಶಿ.ಜು. ಪಾಷಾ, ಐಡಿಯಲ್ ಗೋಪಿ, ಯೇಸುದಾಸ್, ಅಫ್ರೀದಿ, ಮುಕ್ತಿಯಾರ್ ಅಹಮ್ಮದ್ ಮೊದಲಾದವರಿದ್ದರು.

ಈಗ ಶಾಂತಿ ಸಭೆ ಅಗತ್ಯ…
ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ನಡೆಸುತ್ತದೆ. ಆದರೆ, ರಾಗಿಗುಡ್ಡ ವಿಷಯಕ್ಕೆ ಸಂಬಧಿಸಿದಂತೆ ಈಗ ಶಾಂತಿ ಸಭೆ ನಿಜವಾಗಿಯೂ ಅಗತ್ಯ ಇದೆ. ಈ ಸಭೆಗೆ ಹೊರಗಡೆಯಿಂದ ಯಾರನ್ನೂ ಕರೆಯಬೇಕಾಗಿಲ್ಲ. ರಾಗಿಗುಡ್ಡ ವ್ಯಾಪ್ತಿಯಲ್ಲಿ ಇರುವ ಮೂರು ಸಮುದಾಯಗಳ ಮುಖಂಡರನ್ನು ಕರೆದು ಸಭೆ ನಡೆಸಿ ಸೌಹಾರ್ದತೆ ಮೂಡಿಬೇಕಾಗಿದೆ ಆಯನೂರು ಮಂಜುನಾಥ್ ಹೇಳಿದರು.

ಆರ್.ಎಂ. ಮಂಜುನಾಥಗೌಡ ಮೇಲಿನ ಇಡಿ ದಾಳಿಗೆ ಖಂಡನೆ…
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನೆ ಮೇಲೆ ಇಡಿ ದಾಳಿ ಆಗಿದೆ. ಇದೊಂದು ರಾಜಕೀಯ ಪ್ರೇರಿತ ಷಡ್ಯಂತ್ರ. ಅವರು ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದು ತಪ್ಪು ಎನ್ನುವಂತೆ ಆಗಿದೆ. ಬ್ಯಾಂಕ್ ನಲ್ಲಿ ನಕಲಿ ಬಂಗಾರ ಹಗರಣ ನಡೆದು 10 ವರ್ಷ ಕಳೆದಿದೆ. ಯಾವುದೇ ಅಧ್ಯಕ್ಷ ಆಡಳಿತ ಮಂಡಳಿ ನಾಯಕ ಮಾತ್ರ ಆಗಿರುತ್ತಾನೆ. ಬ್ಯಾಂಕ್ ಎಂಡಿ ಮೇಲೆ ದಾಳಿ ಆಗಬೇಕಿತ್ತು. ನಿರ್ದೇಶಕರನ್ನೂ ಹೊಣೆ ಮಾಡಬೇಕಿತ್ತು. ಅದು ಯಾವುದೂ ಆಗಿಲ್ಲ ಎಂದು ದೂರಿದ ಆಯನೂರು ಮಂಜುನಾಥ್, ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.

Leave A Reply

Your email address will not be published.

error: Content is protected !!