ಪಠ್ಯ ಪುಸ್ತಕ ವಿಷಯಗಳಲ್ಲಿ ಹೇರಿಕೆಯ ಬದಲಾವಣೆ ಸಲ್ಲದು

0 94

ಶಿವಮೊಗ್ಗ: ಪಠ್ಯ ಪುಸ್ತಕ ವಿಷಯಗಳಲ್ಲಿ ಹೇರಿಕೆಯ ಬದಲಾವಣೆ ಸಲ್ಲದು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಹೇಳಿದರು.

ಅವರು ಇಂದು ಕುವೆಂಪು ವಿವಿ, ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು, ಇತಿಹಾಸ ಅಧ್ಯಾಪಕರ ಸಂಘ, ಐಕ್ಯೂಎಸಿ(ಆಂತರಿಕ ಗುಣಮಟ್ಟ ಭರವಸೆ ಕೋಶ) ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಇತಿಹಾಸ ಪಠ್ಯಕ್ರಮ ಕುರಿತ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಎನ್ಇಪಿ(ನೂತನ ರಾಷ್ಟ್ರೀಯ ಶಿಕ್ಷಣ ನೀತಿ) ಬಂದ ಮೇಲೆ ಅನೇಕ ಗೊಂದಲಗಳು ಉಂಟಾಗಿವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗೊಂದಲಗಳು ಇದ್ದರೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಹೊಸ ವ್ಯವಸ್ಥೆ ಬರುವ ಮುನ್ನ ಚರ್ಚೆ, ಸಹಯೋಗ ಇರಬೇಕು. ಹೇರಿಕೆಯಿಂದ ಯಾವುದೇ ಪಠ್ಯ ಬದಲಾವಣೆಯನ್ನು ಮಾಡಬಾರದು. ಇದು ಅನಾಹುತಕ್ಕೆ ದಾರಿಯಾಗುತ್ತದೆ ಎಂದರು.

ಚರಿತ್ರೆ ಮತ್ತು ಚಾರಿತ್ರ್ಯ ಎರಡನ್ನೂ ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮದು. ಶಿಕ್ಷಣ ಶಾಸ್ತ್ರದಲ್ಲಿ ಪ್ರಮುಖವಾದುದೇ ಇತಿಹಾಸ. ನಾಗರಿಕರನ್ನಾಗಿಸಲು ಇತಿಹಾಸದ ಓದು ಸಹಾಯಕವಾಗುತ್ತದೆ. ಆದರೆ, ಇಂತಹ ಇತಿಹಾಸವೇ ತಪ್ಪಾದರೆ ಬದಲಾವಣೆ ಹೇಗೆ ಸಾಧ್ಯ? ಎನ್ಇಪಿಯಿಂದ ಅಧ್ಯಾಪಕರೇ ಗೊಂದಲದಲ್ಲಿದ್ದಾರೆ ಎಂದರೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂದರು.

ಈ ಎಲ್ಲಾ ಹಿನ್ನಲೆಯಲ್ಲಿ ಇಂದಿನ ಕಾರ್ಯಾಗಾರ ಉತ್ತರವಾಗಬೇಕು. ಚಿಂತನಾ-ಮಂಥನ ನಡೆಯಬೇಕು. ಸುಧಾರಣೆಗೆ ದಾರಿಯಾಗಬೇಕು. ನಮ್ಮ ಪೂರ್ವಿಕರ ಕಲ್ಪನೆಗಳು ಇಲ್ಲದೇ ಹೋದರೆ, ಜ್ಞಾನದ ಅರಿವಿನ ವಿಸ್ತಾರ ಆಗುವುದಿಲ್ಲ. ಇತಿಹಾಸದ ಮೌಲ್ಯಗಳು ಶಿಕ್ಷಣದ ಭಾಗವೇ ಆಗಿರುವುದರಿಂದ ಮಕ್ಕಳಿಗೆ ಉತ್ತಮ ಪಠ್ಯದ ಅವಶ್ಯಕತೆ ಇದೆ ಎಂದರು.

ಕುವೆಂಪು ವಿವಿಯ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಮುಖ್ಯಸ್ಥೆ ಪ್ರೊ. ಸರ್ವಮಂಗಳಾ ಜಿ. ಮಾತನಾಡಿ, ಎನ್ಇಪಿ ಬಗ್ಗೆ ಗೊಂದಲಗಳು ಕೇಳಿ ಬರುತ್ತಿರುವುದು ದುರಾದೃಷ್ಟಕರವಾಗಿದೆ. ಇದು ಹೈರಾಣಾಗಿದೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಹಲವು ಸಮಸ್ಯೆಗಳು ನಮ್ಮ ಮುಂದಿವೆ. ಎನ್ಇಪಿಯ ಹಿನ್ನಲೆಯಲ್ಲಿ ನಾನೂ ಕೂಡ ಕೆಲಸ ಮಾಡಿದ್ದೆ. ಆದರೆ ಇದರಿಂದ ದೂರ ಸರಿದಿದ್ದೆ. ನಮಗೆ ಬೇಕೋ ಬೇಡವೋ ಇದು ನಮ್ಮ ಮುಂದಿದೆ. ನಾವೆಲ್ಲರೂ ಸೇರಿ ಇದರ ಆಗು ಹೋಗುಗಳ ಬಗ್ಗೆ ಚರ್ಚಿಸಿ ಸಮಸ್ಯೆ ಗುರುತಿಸಿ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಗಾರದ ಸಂಯೋಜಕ ಡಾ.ಆರ್.ಎಂ. ಜಗದೀಶ್, ರಾಷ್ಟ್ರೀಯ ಶಿಕ್ಷಣ ನೀತಿ ಗೊಂದಲದ ಗೂಡಾಗಿದೆ. ಸ್ಪಷ್ಟತೆ ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಬಿಟ್ಟಂತಾಗಿದೆ. ಅಧ್ಯಾಪಕರು ಗೊಂದಲದಲ್ಲಿದ್ದಾರೆ. ಮೂಲ ಪಠ್ಯಕ್ಕೆ ಬದಲಾವಣೆ ಸಾಧ್ಯವಿಲ್ಲ. ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಎಸ್. ನಾಗಭೂಷಣ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ಇತಿಹಾಸ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಕೆ.ಎನ್. ಮಂಜುನಾಥ್, ಕಾರ್ಯದರ್ಶಿ ಡಾ. ರಂಗನಾಥರಾವ್, ಪ್ರಾಧ್ಯಾಪಕರಾದ ಬಿ. ನಾಗೇಶಗೌಡ, ಡಾ. ಕೆ. ಪ್ರಭಾಕರರಾವ್, ಎಸ್.ಸುಮಾ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜನಾಧಿಕಾರಿ ಆರಡಿ ಮಲ್ಲಯ್ಯ, ಕೆ.ಆರ್. ವಿಶ್ವಕುಮಾರ್, ನೃಪತುಂಗ ಇದ್ದರು.

Leave A Reply

Your email address will not be published.

error: Content is protected !!