ತೀರ್ಥಹಳ್ಳಿ: ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ಇವರನ್ನು ಕರ್ತವ್ಯಲೋಪ ಹಾಗೂ ಅಧಿಕಾರ ದುರ್ಬಳಕೆ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ, ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ಮಾತನಾಡಿ, ಶಾಸಕ ಆರಗ ಜ್ಞಾನೇಂದ್ರರವರ ನಡುವಳಿಕೆಯಿಂದ ಸರ್ಕಾರಿ ಅಧಿಕಾರಿಗಳು ದಾರಿತಪ್ಪುತ್ತಿದ್ದಾರೆ, ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ನಾನೇ ತಂದ ಕಾರ್ಯಕ್ರಮಗಳೆಂದು ಸುಳ್ಳು ಹೇಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಸಕರ ಮಾತು ಕೇಳಿ ಬಿಜೆಪಿ ಏಜೆಂಟ್ ರಂತೆ ವರ್ತಿಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಡಿ.ಎಸ್. ವಿಶ್ವನಾಥ್ ಶೆಟ್ಟಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್ ತನ್ನೊಬ್ಬನ ಸಾಧನೆ ಎನ್ನುವಂತೆ ಬಿಂಬಿಸಲು ಹೊರಟಿದ್ದು, ಸಚಿವರು ಸರ್ಕಾರದ ಪಾಲುದಾರಿಕೆ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಮೊನ್ನೆ ನಡೆದ ಶಾಲಾ ಮಕ್ಕಳಿಗೆ ಬ್ಯಾಗ್, ಸ್ವಟರ್ ವಿತರಣಾ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆ ಆಗಲು ಜ್ಞಾನೇಂದ್ರರ ಕುಮ್ಮಕ್ಕು ಕಾರಣ, ಶಾಸಕರು ಹಾಗೂ ಅವರ ಪಿ.ಎ.ಬಸವರಾಜ್ ಸರ್ಕಾರಿ ಅಧಿಕಾರಗಳನ್ನು ದಾರಿ ತಪ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಮುಖಂಡ ಬಿ.ಆರ್.ರಾಘವೇಂದ್ರ ಶೆಟ್ಟಿ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಉಸ್ತುವಾರಿ ಸಚಿವರ ಗಮನಕ್ಕೆ ಅಥವಾ ಸರ್ಕಾರದ ಪ್ರತಿನಿಧಿಗಳಿಗೆ ಆಡಳಿತ ಪಕ್ಷವಾದ ಕಾಂಗ್ರೆಸ್‌ನ ಪ್ರಮುಖರಿಗೆ ಗಮನಕ್ಕೆ ತಾರದೇ ಒಂದು ಪಕ್ಷದ ಪರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರನ್ನು ಹಾದಿತಪ್ಪಿಸಿ ಸರ್ಕಾರದ ಕಾರ್ಯಕ್ರಮವನ್ನು ಮರೆಮಾಚಿ ಬಿಜೆಪಿ ಮುಖಂಡರ ಅಣತಿಯಂತೆ ಕರ್ತವ್ಯ ನಿರ್ವಹಿಸಿರುವ ಬಿಇಒ ಗಣೇಶ್ ಇವರನ್ನು ತಕ್ಷಣ ಅಮಾನತು ಪಡಿಸಬೇಕೆಂದರು.
ನಂತರ ಪ್ರತಿಭಟನಾ ಸ್ಥಳಕ್ಕೆ ಶಿವಮೊಗ್ಗದಿಂದ ಆಗಮಿಸಿ ಮಾತನಾಡಿದ ಡಿಡಿಪಿಐ ಮಂಜುನಾಥ್, ಈ ಪ್ರಕರಣವನ್ನು ಇಲಾಖೆ ಗಂಭೀರವಾಗಿ ತೆಗೆದುಕೊಂಡು ಬಿ.ಇ.ಓ.ರವರಿಗೆ ಒಂದು ವಾರಗಳ ಕಾಲ ರಜೆ ನೀಡಿ ತನಿಖೆಗೆ ಆದೇಶಿಸುತ್ತೇನೆ, ತನಿಖೆಯ ನಂತರ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗಡೆ, ಡಾ.ಸುಂದರೇಶ್, ಯುವ ಕಾಂಗ್ರೆಸ್ ಮುಖಂಡರಾದ ಪೂರ್ಣೇಶ್ ಕೆಳಕೆರೆ, ಶ್ರೇಯಸ್ ರಾವ್, ಅಮರನಾಥ ಶೆಟ್ಟಿ, ಜಯಕರ ಶೆಟ್ಟಿ, ಅಶ್ವಲ್, ಪ.ಪಂ.ಸದಸ್ಯರಾದ ಗೀತಾ ರಮೇಶ್, ಶಬನಮ್,ಮಂಜುಳಾ ನಾಗೇಂದ್ರ, ಜೀನಾ ವಿಕ್ಟರ್ ಡಿಸೋಜಾ ಮುಂತಾದವರಿದ್ದರು.
ರೈತರೇ ಗಮನಿಸಿ ಬೆಳೆ ಸಮೀಕ್ಷೆ ಮಾಡದಿದ್ದರೆ ಈ ಸೌಲಭ್ಯಗಳು ಸಿಗಲ್ಲ !
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.