ತೀರ್ಥಹಳ್ಳಿ : ತಾಲ್ಲೂಕಿನ ಕೋಣಂದೂರಿನಲ್ಲಿ ಸರ್ಕಾರಿ ಅನುದಾನಿತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರವನ್ನು ಕಡಿದಿರುವುದು ಇದೀಗ ಗಂಭೀರ ಆರೋಪಕ್ಕೆ ಕಾರಣವಾಗಿದೆ. ಮರದಲ್ಲಿ ಆಶ್ರಯ ಪಡೆದಿದ್ದ ಹಕ್ಕಿಗಳು ಸಾವನ್ನಪ್ಪಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.
ವಿದ್ಯಾರ್ಥಿಗಳ ಆಕ್ಷೇಪ
ಪಕ್ಷಿಗಳ ಕಾಟವಿದೆ ಎಂಬ ನೆಪದಲ್ಲಿ ಶಾಲೆಯವರು ಅರಣ್ಯ ಇಲಾಖೆಯ ಯಾವುದೇ ಅನುಮತಿ ಪಡೆಯದೇ ಮರಗಳನ್ನು ಬೋಳಿಸಿರುವುದನ್ನು ವಿದ್ಯಾರ್ಥಿಗಳೇ ಪ್ರಶ್ನಿಸಿರುವುದು ಗಮನಾರ್ಹ. ಕೆಲ ಮರಗಳನ್ನೂ ಕಡಿಯಲಾಗಿದೆ ಎಂಬುದಾಗಿ ವಿದ್ಯಾರ್ಥಿಗಳಿಂದಲೇ ಗಂಭೀರ ಆರೋಪಗಳು ಕೇಳಿಬಂದಿವೆ.
ಇಲಾಖೆಗೆ ಮಾಹಿತಿಯೇ ಇಲ್ಲದೆ ಎರಡು ದಿನ
ಈ ಘಟನೆ ನಡೆದಿದ್ದು ಎರಡು ದಿನಗಳಾದರೂ ಅರಣ್ಯ ಇಲಾಖೆಗೆ ಮಾಹಿತಿ ತಲುಪಿರಲಿಲ್ಲ. “ನಮ್ಮ ಜಾಗದಲ್ಲಿರುವ ಮರ ಏನು ಬೇಕಾದರೂ ಮಾಡಬಹುದು” ಎಂಬ ಶಾಲಾ ಆಡಳಿತ ಮಂಡಳಿಯ ನಿಲುವು ಮಾಹಿತಿ ಕೊರತೆಯೋ ಅಥವಾ ಉದ್ಧಟತನದ ಪರಮಾವಧಿಯೋ ಎಂಬ ಪ್ರಶ್ನೆ ಎದ್ದಿದೆ.
ಹಕ್ಕಿಗಳಿಗೆ ಕಳೆದು ಹೋದ ಆಶ್ರಯ
ಕೋಣಂದೂರು ಹೆದ್ದಾರಿ ವಿಸ್ತರಣೆ ವೇಳೆ ಅರಣ್ಯ ಇಲಾಖೆ ತಾವೇ ಹಲವಾರು ಮರಗಳನ್ನು ಕಡಿದಿದ್ದರಿಂದ, ಆ ಹಕ್ಕಿಗಳು ಈ ಪ್ರದೇಶದಲ್ಲಿ ಆಶ್ರಯ ಪಡೆದಿದ್ದವು. ಆದರೆ, ಈಗ ಶಾಲೆಯ ಆಲಸ್ಯ ಹಾಗೂ ನಿರ್ಲಕ್ಷ್ಯದಿಂದ ಅವುಗಳಿಗೆ ಸುರಕ್ಷಿತ ಸ್ಥಳವೇ ಕಳೆದುಹೋಗಿದೆ ಎಂದು ಪರಿಸರ ಹಿತಾಸಕ್ತಿ ವಲಯಗಳು ಆರೋಪಿಸಿವೆ.
ಇಲಾಖೆಯ ಮೇಲೂ ಪ್ರಶ್ನೆ
ಘಟನೆ ನಡೆದಿದ್ದು ಎರಡು ದಿನಗಳಾದರೂ ಅರಣ್ಯ ಇಲಾಖೆ ಸಂಪೂರ್ಣ ಅಜಾಗರೂಕತೆಯಿಂದ ವರ್ತಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. “ಈ ಚಂದಕ್ಕೆ ಅರಣ್ಯ ಇಲಾಖೆ ಯಾಕಿದೆ?” ಎಂಬ ಪ್ರಶ್ನೆ ಕಟುವಾಗಿ ಕೇಳಿಬಂದಿದೆ. ಈಗ ಸ್ಥಳೀಯ ಆರ್‌ಎಫ್‌ಒ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650