ಶಿವಮೊಗ್ಗ ; ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ಮೂಲ. ಸತ್ಯಾನ್ವೇಷಣೆಯ ದಾರಿಯಲ್ಲಿ ನಡೆದಾಗ ಜೀವನ ಮೌಲ್ಯ ಸಮೃದ್ಧಿಗೊಳ್ಳಲು ಸಾಧ್ಯ. ಪೂರ್ವಜರ ಮೌಲ್ಯಾಧಾರಿತ ಚಿಂತನಗಳು ಬಾಳಿನ ವಿಕಾಸಕ್ಕೆ ಆಶಾ ಕಿರಣ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಾಗೂ ಎಸ್.ಜೆ.ಪಿ. ಐಟಿಐ 32ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಅದರಂತೆ ಸಂಸ್ಕಾರ ಸಚ್ಚಾರಿತ್ರ್ಯದಿಂದ ಬದುಕು ಉಜ್ವಲಗೊಳ್ಳುತ್ತದೆ. ಮನುಷ್ಯನಲ್ಲಿ ಬುದ್ಧಿ ಮತ್ತು ಸದ್ವಿಚಾರಗಳು ಬೆಳೆದು ಬಂದಾಗ ಜೀವನದಲ್ಲಿ ಶ್ರೇಯಸ್ಸು ಪಡೆಯಲು ಸಾಧ್ಯವಾಗುತ್ತದೆ. ಜ್ಞಾನದ ಕಣ್ಣು ಶ್ರೀ ಗುರು. ಸೂರ್ಯ ಕಿರಣದಿಂದ ಹೂವು ಅರಳಿದರೆ ಗುರು ಕಾರುಣ್ಯದಿಂದ ಆತ್ಮ ಅರಳುತ್ತದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಸಕಲರಿಗೂ ಒಳಿತಾದ ಸಾಧನೆಗೆ ನಿಲುಕುವ ಶಿವಾದ್ವೈತ ಸಿದ್ಧಾಂತಗಳನ್ನು ಬೋಧಿಸಿ ಉದ್ಧರಿಸಿದ್ದನ್ನು ಕಾಣಬಹುದು. ಬುದ್ಧಿ ಶಕ್ತಿ ಬೆಳೆದಂತೆ ಮನೋಭಾವನೆಗಳು ಬೆಳೆಯುತ್ತಿಲ್ಲವಾದ್ದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆ ಬೆಳೆದಾಗ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಿಘ್ನೇಶ್ವರಯ್ಯ ಸೋಲಾಪುರ ಬಡತನದಲ್ಲಿ ಬೆಳೆದು ಬಂದು ಬಹಳ ಶ್ರಮವಹಿಸಿ ಶ್ರೀ ಜಗದ್ಗುರು ಪಂಚಾಚಾರ್ಯ ನಾಮಾಂಕಿತದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಹುಟ್ಟು ಹಾಕಿರುವುದು ಅವರಲ್ಲಿರುವ ಸ್ವಾಭಿಮಾನ ಧರ್ಮ ಶ್ರದ್ಧೆಗೆ ಸಾಕ್ಷಿಯಾಗಿದೆ. ಸಂಸ್ಥೆಯಲ್ಲಿ ಓದಿದ ನೂರಾರು ಜನರ ಬಾಳಿಗೆ ಬೆಳಕಾಗಿರುವುದು ಸಂತೋಷದ ಸಂಗತಿ ಎಂದು ಹರುಷ ವ್ಯಕ್ತಪಡಿಸಿದರು.

ಜ್ಯೋತಿ ಬೆಳಗಿಸಿ ಸಮಾರಂಭ ಉದ್ಘಾಟಿಸಿದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾದದ್ದು ಬಹಳಷ್ಟಿದೆ. ಜೀವನದ ಜಂಜಡದಲ್ಲಿ ಸಿಲುಕಿರುವ ಜೀವಾತ್ಮರಿಗೆ ಗುರು ಜ್ಞಾನ ಬೋಧಾಮೃತ ಮತ್ತು ಕ್ರಿಯಾಶೀಲ ಜೀವನ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ತರಬೇತಿ ಕೇಂದ್ರದ ವಾರ್ಷಿಕೋತ್ಸವ ಜೊತೆಗೆ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಹಮ್ಮಿಕೊಂಡಿರುವುದು ಅವರಲ್ಲಿರುವ ಧಾರ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮಾಚೇನಹಳ್ಳಿಯ ಟೆಕ್ನೊರಿಂಗ್ಸ್ ಮತ್ತು ಶಶಿ ಭಾರತ ಇಂಡಸ್ಟ್ರಿ ಎಮ್.ಡಿ. ಬಿ.ಎಸ್.ಸಂಗೀತಾ ಕಲಿಯುವ ವಿದ್ಯಾರ್ಥಿಗಳಲ್ಲಿ ಕಲಿಯುವ ಛಲ ಬೇಕು ಜೊತೆಗೆ ಕೌಶಲ್ಯ ಬೇಕು. ವಿಕಸಿತ ಭಾರತದಲ್ಲಿ ಸಾಕಷ್ಟು ಅವಕಾಶಗಳಿದ್ದು ಅವುಗಳ ಸದುಪಯೋಗಪಡೆಯಬೇಕು. ಕನಸುಗಳು ದೊಡ್ಡದಾಗಿರಬೇಕು. ಅಂದಾಗ ಅವರ ಭವಿಷ್ಯತ್ತು ಉಜ್ವಲವಾಗಲಿದೆ ಎಂದರು.
ಸೋಮಶೇಖರ ಜಿ., ರಾಕೇಶ ಆರಾಧ್ಯ, ಹೆಚ್.ಪಿ.ರವೀಶ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಮಾತನಾಡಿದರು. ರುಕ್ಷಿಣಿ ವೇದವ್ಯಾಸ, ಡಾ.ರುದ್ರಾಂಬಿಕಾ ಎಸ್. ಬಿರಾದಾರ, ಬಿ.ಟಿ. ಶೇಖರಪ್ಪ, ಮೋಹನಕುಮಾರ, ಲಿಂಗಸುಗೂರಿನ ಸರ್ವೇಶ್ವರಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಸಮಾರಂಭದ ಸಮ್ಮುಖ ವಹಿಸಿದ ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಸ್ವಾಮಿಗಳು ಹಾರನಹಳ್ಳಿ ವಿಘ್ನೇಶ್ವರಯ್ಯನವರ ಜೀವನದ ಸಿದ್ಧಿ ಸಾಧನೆ ಹಾಗೂ ಧರ್ಮ ಪೀಠಗಳ ಮೇಲೆ ಇಟ್ಟಿರುವ ಶ್ರದ್ಧಾ ಅಭಿಮಾನ ಕಂಡು ಸಂತಸ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 5 ಪ್ರತಿಭಾನ್ವಿತರಿಗೆ ಹಾಗೂ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದ ಎಸ್‌ಜೆಪಿ ಐಟಿಐ ಸಿಬ್ಬಂದಿಯವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉಚಿತ ಆರೋಗ್ಯ ತಪಾಸಣೆ-ನೇತ್ರ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ವಿಘ್ನೇಶ್ವರಯ್ಯ ಸೋಲಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಸ್ಥೆಯ ಮೇಲೆ ಶ್ರೀ ರಂಭಾಪುರಿ ಜಗದ್ಗುರುಗಳವರ ಸಂಪೂರ್ಣ ಆಶೀರ್ವಾದವಿದೆ. ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಜಂಗಮ ಮಹಿಳಾ ಸಮಾಜದಿಂದ ಪ್ರಾರ್ಥನೆ ಜರುಗಿತು. ಪ್ರಾಚಾರ್ಯ ಡಿ.ಎನ್.ಪರಮೇಶ್ವರಪ್ಪ ಸ್ವಾಗತಿಸಿದರು. ಶಾಂತಾ ಆನಂದ ನಿರೂಪಿಸಿದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳವರನ್ನು ಎಂ.ಆರ್.ಎಸ್. ವೃತ್ತದಿಂದ ಎಸ್.ಜೆ.ಪಿ.ಐಟಿಐವರೆಗೆ ವಿವಿಧ ವಾದ್ಯ ವೈಭವಗಳೊಂದಿಗೆ ವೇದಘೋಷ, ಕಳಶ, ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ಸಮಾರಂಭದ ನಂತರ ಪ್ರಸಾದ ವಿತರಣೆ ಜರುಗಿತು. ಧರ್ಮ ಸಭೆಯ ನಂತರ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ಜರುಗಿತು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





