ಇದು ನನ್ನ ಕೊನೆ ಚುನಾವಣೆ ; ಕೆ.ಎಸ್.ಈಶ್ವರಪ್ಪ

0 98

ಶಿಕಾರಿಪುರ : ಇದು ನನ್ನ ಕೊನೆ ಚುನಾವಣೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಅವರು ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಗೊಗ್ಗ ಗ್ರಾಮದಲ್ಲಿ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ಕನಕ ಮಂದಿರಕ್ಕೆ ಭೇಟಿ ನೀಡಿ ದಾಸ ಶ್ರೇಷ್ಠ ಕನಕದಾಸರ ದರ್ಶನ ಪಡೆದರು.

ನಂತರ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಸಿದ್ಧಾಂತ ಬಗ್ಗೆ ಗೊಗ್ಗ ಗ್ರಾಮದಲ್ಲಿ ಹೇಳುವ ಅವಶ್ಯಕತೆ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿ ಸೇರಿದಂತೆ ಹಿಂದುತ್ವದ ಬಗ್ಗೆ ಪ್ರಪಂಚದಲ್ಲಿ ಭಾರತವನ್ನು ಎತ್ತರಕ್ಕೆ ಬೆಳೆಸುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಕ್ರಮೇಣ ಹಿಂದುತ್ವ ಪಕ್ಕ ಸರಿಯುವಂತಾಗಿದೆ. ಸಿ.ಟಿ.ರವಿ ಪ್ರತಾಪ್ ಸಿಂಹ, ಬಸವನಗೌಡ ಪಾಟೀಲ್ ಯತ್ನಾಳ್, ಸದಾನಂದ ಗೌಡ, ಅನಂತಕುಮಾರ್ ಹೆಗ್ಗಡೆ ಎಲ್ಲರನ್ನೂ ಪಕ್ಕಕ್ಕೆ ಇಡುವ ಪ್ರಯತ್ನ ಪಕ್ಷದಲ್ಲಿ ಆಗಿದೆ ಎಂಬುದು ನೋವಿನ ಸಂಗತಿ. ಇಂತಹ ಅನ್ಯಾಯವನ್ನು ಸುಮ್ಮನೆ ನೋಡಿಕೊಂಡು ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿದವರ ಅಭಿಪ್ರಾಯವಾಗಿದೆ.

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಮಹಾ ಪುರುಷರೆಲ್ಲಾ ಸೇರಿಕೊಂಡು ಕಟ್ಟಿದ ಪಕ್ಷ ಶುದ್ಧೀಕರಣವಾಗಬೇಕಿದೆ. 108 ಸ್ಥಾನದಲ್ಲಿದ್ದ ಪಕ್ಷ ಈಗ 66ಕ್ಕೆ ಬಂದಿದೆ ಹೀಗೆ ಮುಂದುವರೆದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ. ಈ ಎಲ್ಲಾ ಅಂಶಗಳು ರಾಜ್ಯದಲ್ಲಿ ರಾಷ್ಟ್ರ ಮಟ್ಟದ ನಾಯಕರಲ್ಲಿ ಚರ್ಚೆಯಗಾಬೇಕಿದೆ. ಇದೇ ಉದ್ದೇಶದಿಂದ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಚುನಾವಣೆಗೆ ನಿಂತಾಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಿಕ್ಕ ಅಭೂತ ಪೂರ್ವ ಬೆಂಬಲದಿಂದ ನೂರಕ್ಕೆ ನೂರು ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ಬಂದಿದೆ.

ಚುನಾವಣೆಯಿಂದ ಹಿಂದೆ ಸರಿಯುವ ಕಾಲ ಮುಗಿದು ಹೋಗಿದೆ. ಸ್ಪರ್ಧೆ ಮಾಡಿ ಚುನಾವಣೆಯಲ್ಲಿ ಗೆಲ್ಲುವುದು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಿಶ್ಚಯವಾಗಿದೆ. ಕ್ಷೇತ್ರದಲ್ಲಿ ಜನ ಸಾಮಾನ್ಯರು ನನಗೆ ಬೆಂಬಲ ನೀಡಿ ಆಶೀರ್ವಾದ ಮಾಡುತ್ತಿದ್ದಾರೆ. ಶಿವಮೊಗ್ಗ ನಗರ ಜನತೆ ನನ್ನನ್ನು ಐದು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ‌. ಎಲ್ಲಾ ಸಮಾಜದ ಜಾತಿಯ ಜನರು ನನ್ನ ಸೋದರನ ಹಾಗೆ ಬೆಂಬಲಿಸಿದ್ದಾರೆ. ನೀವು ಸಹ ಅಣ್ಣ ತಮ್ಮನ ರೀತಿ ನನಗೆ ಆಶೀರ್ವಾದ ಮಾಡಿ ಮುಂದಿನ ಐದು ವರ್ಷ ಎಲ್ಲಾ ಜಾತಿ ಸಮಾಜದ ಜೊತೆಗೆ ಇರುತ್ತೇನೆ.

ಮುಂದಿನ ಐದು ವರ್ಷದ ನಂತರ ನಾನು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಆದರೆ ಈ ಐದು ವರ್ಷಗಳಲ್ಲಿ ಪ್ರತಿ ಹಳ್ಳಿ ಸಮಾಜ ವ್ಯಕ್ತಿಗಳ ಜೊತೆ ನಾನು ಇರುತ್ತೇನೆ. ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ ನಾವೆಲ್ಲಾ ಸೇರಿ ಮೋದಿಯವರನ್ನು ಪ್ರಧಾನಿ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಗೊಗ್ಗ ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!