ರಿಪ್ಪನ್‌ಪೇಟೆ ಶ್ವೇತಾ ವಿರುದ್ಧ ದೂರದ ಅಂತರ್ ಜಿಲ್ಲೆಯಲ್ಲೂ ದಾಖಲಾಯ್ತು ಮತ್ತೊಂದು ವಂಚನೆ ಕೇಸ್ !

0 253

ರಿಪ್ಪನ್‌ಪೇಟೆ : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಶ್ವೇತಾ ರಿಪ್ಪನ್‌ಪೇಟೆ ಎಂಬ ಮಹಿಳೆ ಲಕ್ಷಾಂತರ ರೂ. ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈಗಾಗಲೇ ಶ್ವೇತಾ ಸೇರಿದಂತೆ ಇಬ್ಬರ ವಿರುದ್ಧ ತೀರ್ಥಹಳ್ಳಿ ಮೂಲದ ಅರ್ಜುನ್ ಎಂಬುವವರು ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದರ ಬೆನ್ನಲ್ಲೇ ದೂರದ ಬಾಗಲಕೋಟೆ ಜಿಲ್ಲೆಯ ನವನಗರ ಠಾಣೆಯಲ್ಲೂ ಮತ್ತೊಂದು ಕೇಸ್ ದಾಖಲಾಗಿದ್ದು, ಗಂಗಾಧರ ಗಿಡವೀರ ಗುಳೇದಗುಡ್ಡ ಎಂಬುವವರು ದೂರು ನೀಡಿದ್ದು ಇಬ್ಬರು ಆರೋಪಿಗಳಾದ ಪ್ರಶಾಂತ ತಂದೆ ಲಕ್ಷ್ಮಣ್ ರಾವ್‌ ದೇಶಪಾಂಡೆ ಕುಣಿಕುಮಟಗಿ, ವಿಜಯಪುರ ಮತ್ತು ಶ್ವೇತಾ ರಿಪ್ಪನ್‌ಪೇಟೆ ಇವರಿಬ್ಬರು ನನಗೆ ನೌಕರಿ ಕೊಡಿಸುವುದಾಗಿ ನಂಬಿಸಿ ನನ್ನಿಂದ ಹಣ ಪಡೆದು ಸುಳ್ಳು ಆದೇಶ ಪ್ರತಿ ತಯಾರಿಸಿ ಮೋಸ ಮಾಡಿದ್ದು ಅಲ್ಲದೆ ಹಣ ಕೇಳಿದರೆ ಸುಪಾರಿ ಕೊಟ್ಟು ಸಾಯಿಸಿ ಬಿಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿದ್ದಾರೆ.

ಇಲ್ಲಿಯವರೆಗೆ ಅವರು ಹಣ ಮರಳಿ ಕೊಡುವುದಾಗಿ ತಿಳಿಸಿದ್ದರಿಂದ ಯಾವುದೇ ದೂರು ಕೊಟ್ಟಿಲ್ಲ. ಈಗ ಅವರು ಹಣ ಕೊಡುವುದಿಲ್ಲ ಅಂತಾ ಗೊತ್ತಾಗಿ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ನವನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಗಂಗಾಧರ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಬಾಗಲಕೋಟೆ ಜಿಲ್ಲೆಯ ನವನಗರ ಠಾಣೆಯಲ್ಲಿ IPC 1860 (U/s-420, 461, 467, 471, 506) ಅಡಿ ದೂರು ದಾಖಲಾಗಿದೆ.

_______________________________

ಬಣ್ಣದ ಮಾತಿಗೆ ಕ್ಲೀನ್ ಬೋಲ್ಡ್ !

ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ತೀರ್ಥಹಳ್ಳಿ ಅರ್ಜುನ್, ಶಿವಮೊಗ್ಗದ ನವೀನ್ ಮತ್ತು ಆದರ್ಶ ಮೂವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಇತ್ತ ಅನೇಕ ಬಾರಿ ಶ್ವೇತಾ ಮನೆ ಬಾಗಿಲಿಗೆ ಹೋದರೆ ನೂರೆಂಟು ಸುಳ್ಳು ಹೇಳುತ್ತಿದ್ದಾರೆ. ಇದೀಗ ಕೆಲಸವು‌ ಇಲ್ಲದೇ, ಕೊಟ್ಟ ಹಣವು ಇಲ್ಲದೇ ಯುವಕರು ಆತಂಕಗೊಂಡಿದ್ದಾರೆ. ವಂಚಕಿ ಶ್ವೇತಾ ಮಹಿಳೆಯ ಬಳಿ ತಾನು ಕೊಟ್ಟಿರುವ ಹಣ ವಾಪಸ್ ಕೇಳಿದರೆ ಹಣ ಕೊಡದೇ ಸತಾಯಿಸುತ್ತಿದ್ದಾಳೆ. ಅಲ್ಲದೇ ಹಣ ಕೇಳಿದರೆ ನಿನ್ನ ಮೇಲೆ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳಂತೆ. ಈ ಕುರಿತು ವಂಚನೆಗೊಳಗಾದ ಆದರ್ಶ ಮತ್ತು ನವೀನ್ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಿಲ್ಲೆಯ 8ಕ್ಕೂ ಹೆಚ್ಚು ಯುವಕರಿಗೆ ಮೋಸ

ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಸಿಗುತ್ತದೆ ಎಂದು ಕಳೆದ ಒಂದು ವರ್ಷದಲ್ಲಿ ರಿಪ್ಪನ್‌ಪೇಟೆಯ ಮೂವರು ಯುವಕರು 16 ಲಕ್ಷ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ಯುವಕರಿಗೆ ಶ್ವೇತಾ ವಂಚನೆ ಮಾಡಿದ್ದಾರಂತೆ. ಇದು ಶಿವಮೊಗ್ಗ ಜಿಲ್ಲೆಗೆ ಮಾತ್ರ ಸಿಮೀತವಾಗಿಲ್ಲ. ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಅನೇಕ ಯುವಕರಿಗೆ ರೇಲ್ವೆ ಇಲಾಖೆಯಲ್ಲಿ ಉದ್ಯೋಗದ ಹೆಸರಿನಲ್ಲಿ ಶ್ವೇತಾ ಮತ್ತು ಆಕೆಯ ನಕಲಿ ಪತಿ ಪ್ರಶಾಂತ ದೇಶಪಾಂಡೆಯು ವಂಚನೆ ಮಾಡಿದ್ದಾರಂತೆ.

ದೂರು ದಾಖಲಾಗುತ್ತಿದ್ದಂತೆ ಮಹಿಳೆ ಎಸ್ಕೇಪ್ !

ಶ್ವೇತಾ ವಿರುದ್ಧ ಎಫ್ಐಆರ್ ದಾಖಲು ಆಗುತ್ತಿದ್ದಂತೆ ಅವಳು ಎಸ್ಕೇಪ್ ಆಗಿದ್ದಾಳೆ. ಸದ್ಯ ಶ್ವೇತಾ ಮತ್ತು ಪ್ರಶಾಂತ ದೇಶಪಾಂಡೆ ವಿರುದ್ಧ ಕೇಸ್ ದಾಖಲಾಗಿದೆ. ಶ್ವೇತಾ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಓಡಾಡಿಕೊಂಡಿದ್ದಳು. ಎಲ್ಲರ ಜೊತೆ ಫೋಟೋ ತೆಗೆಸಿಕೊಂಡಿದ್ದಾಳೆ. ಇಂತಹ ಚಾಲಾಕಿ ಶ್ವೇತಾ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾಳೆ. ತಾನು ಡಾಕ್ಟರೇಟ್ ಪದವಿ ಪಡೆದುಕೊಂಡಿರುವ ಫೋಟೋಗಳನ್ನು ತನ್ನ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದಾಳೆ. ರಾಜಕಾರಣಿ, ವ್ಯಾಪಾರಸ್ಥೆ, ರೇಲ್ವೆ ಇಲಾಖೆಯ ಪತ್ನಿ ಸೇರಿದಂತೆ ಹತ್ತು ಹಲವು ರೂಪಗಳಲ್ಲಿ ಶ್ವೇತಾ ಕಂಡು ಬಂದಿದ್ದಾರೆ.

ಸದ್ಯ ಶ್ವೇತಾ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಶ್ವೇತಾ ಪತ್ತೆಗಾಗಿ ಮುಂದಾಗಿದ್ದಾರೆ. ನಿರುದ್ಯೋಗಿ ಯುವಕರ ಪರವಾಗಿ ಸಾಮಾಜಿಕ ಹೋರಾಟಗಾರರು ಹೋರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರಿ ಕೆಲಸ ಅಂದ್ರೆ, ಸಾಕು ಜನರು ಹಿಂದೆ ಮುಂದೆ ನೋಡುವುದಿಲ್ಲ. ವಂಚಕರು ತೋಡುವ ಹಳ್ಳಕ್ಕೆ ಸಲೀಸಾಗಿ ಬಿದ್ದು ಬಿಡುತ್ತಾರೆ. ಇದಕ್ಕೆ ಈ ಘಟನೆಯೇ ಕೈಗನ್ನಡಿಯಂತಿದೆ.

Leave A Reply

Your email address will not be published.

error: Content is protected !!