ಸತ್ಕಾರ್ಯಗಳಿಂದ ಜೀವನ ಸಮೃದ್ದಿ : ರಂಭಾಪುರಿ ಶ್ರೀಗಳು

0 246

ಎನ್.ಆರ್.ಪುರ: ವೀರಶೈವ ಧರ್ಮದ ಮೂಲ ಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ತೆಲಂಗಾಣ ರಾಜ್ಯದ ಭುವನಗಿರಿ ಯಾದಾದ್ರಿ ಜಿಲ್ಲೆ ಆಲೇರು ಮಂಡಲ ವ್ಯಾಪ್ತಿಯಲ್ಲಿ ಬರುವ ಕೊಲನಪಾಕ ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಇಂದಿನಿಂದ 5 ದಿನಗಳ ಕಾರ್ಯಕ್ರಮಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ ಚಾಲನೆಯಿತ್ತರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು ಶಿವನ ಸದ್ಯೋಜಾತ ಮುಖದಿಂದ ಕೊಲ್ಲಿಪಾಕಿ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಪುಣ್ಯ ಪಾಲಿನ ಕ್ಷೇತ್ರವಿದು. ಶಿವಾದ್ವೆöÊತ ತತ್ವ ಸಿದ್ಧಾಂತವನ್ನು ಭೂ ಮಂಡಲದಲ್ಲಿ ನೆಲೆಗೊಳಿಸಿದ ಉದ್ಧರಿಸಿದ ಜಗನ್ಮಂಗಲ ಕ್ಷೇತ್ರವಿದು. ಪ್ರಾಚೀನ ಇತಿಹಾಸ ಮತ್ತು ಪರಂಪರೆಯುಳ್ಳ ಈ ಸ್ಥಾನದಲ್ಲಿ ಪ್ರತಿ ವರುಷ ಜನ್ಮ ದಿನ ನಿಮಿತ್ಯ ಮಾಡಿ 5 ದಿನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ನಮಗೆ ಸಂತೃಪ್ತಿ ಸಂತೋಷ ತಂದಿದೆ. ಮನುಷ್ಯ ಜೀವನದಲ್ಲಿ ಬೆಟ್ಟದಷ್ಟು ಸಂಪತ್ತು ಸಂಪನ್ಮೂಲ ಹೊಂದಿದ್ದರೂ ಮಾನಸಿಕ ಶಾಂತಿ ನೆಮ್ಮದಿಯಿಲ್ಲ. ಮಹಿಮಾನ್ವಿತ ಜಾಗೃತ ಈ ಕ್ಷೇತ್ರ ಸಂದರ್ಶನ ಮಾಡುವುದರಿಂದ ಮನುಷ್ಯನಿಗೆ ನೆಮ್ಮದಿ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಜ್ಞಾನ ಕ್ರಿಯಾತ್ಮಕವಾದ ಮತ್ತು ಸಾಮಾಜಿಕ ಚಿಂತನ ಧಾರೆಗಳು ಮನುಷ್ಯನ ಶ್ರೇಯೋಭಿವೃದ್ದಿಗೆ ಸಹಕಾರಿಯಾಗಿವೆ. ಕಾಯಕ ದಾಸೋಹದ ಮೂಲಕ ಸಮಾಜದಲ್ಲಿ ಉತ್ಕರ್ಷತೆ ಉಂಟಾಗುವುದರಲ್ಲಿ ಅವರ ಕೊಟ್ಟ ಸಂದೇಶ ತೋರಿದ ದಾರಿ ಸಕಲರ ಬಾಳಿನಲ್ಲಿ ಬೆಳಕು ಮೂಡಿಸಿವೆ ಎಂದರು.

ನೇತೃತ್ವ ವಹಿಸಿದ ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನೋತ್ಸಾಹ ಪ್ರಾಪ್ತಿಗಾಗಿ ಪುಣ್ಯ ಕ್ಷೇತ್ರಗಳ ದರ್ಶನ ಅವಶ್ಯಕ. ವಿಶ್ವ ಧರ್ಮದ ವಿಭು ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಸೋಮೇಶ್ವರ ಮಹಾಲಿಂಗದಿಂದ ಅವತರಿಸಿ ಭಕ್ತರಲ್ಲಿರುವ ಅಜ್ಞಾನ ಕಳೆದು ಜ್ಞಾನದ ಬೆಳಕು ತುಂಬಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಭವಬಂಧನ ಬಿಡಿಸಿ ಶಿವಜ್ಞಾನ ತುಂಬಿ ಬದುಕನ್ನು ಬೆಳೆಸಲು ಗುರು ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.

ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ನ ಕಾರ್ಯದರ್ಶಿ ಅಣ್ಣಾರಾವ ಬಿರಾದಾರ, ಗುರುಪಾದಪ್ಪ ಕಿಣಗಿ, ಅರ್ಚಕ ಗಂಗಾಧರ, ಗಿರಿಯಪ್ಪ ಮುತ್ಯಾ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.

ಪ್ರಾತಃಕಾಲ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ಜರುಗಿತು.
ಲೋಕಕಲ್ಯಾಣಕ್ಕಾಗಿ ಜನರ ಶಾಂತಿ ನೆಮ್ಮದಿ ಪ್ರಾಪ್ತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಶುಭ ಹಾರೈಸಿದರು. ಆಗಮಿಸಿದ ಭಕ್ತರಿಗೆ ಅನ್ನದಾಸೋಹ ನೆರವೇರಿತು.

Leave A Reply

Your email address will not be published.

error: Content is protected !!