ಆಧ್ಯಾತ್ಮ ಚಿಂತನೆಯಿಂದ ಬಾಳಿಗೆ ನೆಮ್ಮದಿ ; ರಂಭಾಪುರಿ ಶ್ರೀಗಳು

0 382

ಭದ್ರಾವತಿ : ಭಾರತ ದೇಶ ಧರ್ಮ ಪ್ರಧಾನವಾದ ದೇಶ. ಇಲ್ಲಿರುವ ಸಂಸ್ಕೃತಿ ಪರಂಪರೆ ಆದರ್ಶಗಳು ಇನ್ನಿತರರಿಗೆ ಮಾದರಿಯಾಗಿವೆ. ಆಧ್ಯಾತ್ಮ ಚಿಂತನೆಯಿಂದ ಬಾಳಿನಲ್ಲಿ ನೆಮ್ಮದಿ ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಜ್ಞಾನಕ್ಕೂ ಸಿಲುಕದೇ ಇರುವ ಅವ್ಯಕ್ತ ಶಕ್ತಿಯೇ ದೇವರು. ದೇವನೊಬ್ಬ ನಾಮ ಹಲವು. ಯಾವ ಹೆಸರಿನಿಂದ ಪ್ರಾರ್ಥಿಸಿ ಪೂಜಿಸಿದರೂ ಓಗೊಡುವ ಪರಮಾತ್ಮ ಒಬ್ಬನೇ ಎಂಬ ಸತ್ಯ ಅರಿತಾಗ ಸಮಾಜದಲ್ಲಿ ಜಾತಿ ಸಂಘರ್ಷಗಳು ನಡೆಯಲಾರವು. ದೇವರು ಮತ್ತು ಮರಣ ಯಾರೂ ಮರೆಯಬಾರದು. ನಾವು ಮಾಡಿದ ಉಪಕಾರ ಪರರು ಮಾಡಿದ ಅಪಕಾರ ಮರೆತರೆ ಬದುಕು ಶಕ್ತಿಯುತಗೊಳ್ಳಲು ಸಾಧ್ಯ. ಧರ್ಮ, ದೇವರು, ಜಾತಿ ಮತ್ತು ಪ್ರಾಂತೀಯ ಹೆಸರಿನಲ್ಲಿ ನಡೆಯುವ ಸಂಘರ್ಷಗಳು ಮಾನವನ ಶ್ರೇಯಸ್ಸಿಗೆ ಅಡ್ಡಿಯಾಗುತ್ತವೆ. ಧರ್ಮ ಮತ್ತು ವ್ಯಕ್ತಿ ಮಧ್ಯೆ ಗೋಡೆ ನಿರ್ಮಿಸದೇ ಸೇತುವೆ ನಿರ್ಮಿಸುವ ಕೆಲಸ ಎಲ್ಲೆಡೆ ಆಗಬೇಕಾಗಿದೆ. ವೀರಶೈವ ಧರ್ಮದಲ್ಲಿ ವಿಶ್ವಬಂಧುತ್ವದ ಆದರ್ಶ ಮೌಲ್ಯಗಳನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಬೋಧ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದಾರೆ. ಸತ್ಯಂ ವಧ ಧರ್ಮಂ ಚರ ಎಂದಿದೆ ಶಾಸ್ತ್ರ. ಸತ್ಯವನ್ನು ಯಾವಾಗಲೂ ಮಾತನಾಡಬೇಕು. ಧರ್ಮದ ನಡೆಯಂತೆ ಜೀವನ ಇರಬೇಕಾಗುತ್ತದೆ. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದರು.

ಮಳಲಿ ಮಠದ ಡಾ|| ನಾಗಭೂಷಣ ಶ್ರೀಗಳು, ಬಿಳಕಿ ರಾಚೋಟೇಶ್ವರ ಶ್ರೀಗಳು, ಹುಣಸಘಟ್ಟ ಗುರುಮೂರ್ತಿ ಶ್ರೀಗಳು, ಸಿದ್ಧರಬೆಟ್ಟದ ವೀರಭದ್ರ ಶ್ರೀಗಳು, ಚನ್ನಗಿರಿ ಕೇದಾರ ಶಿವಶಾಂತವೀರ ಶ್ರೀಗಳು, ಬೀರೂರು ಬಾಳೆಹೊನ್ನೂರು ಮಠದ ರುದ್ರಮುನಿ ಶ್ರೀಗಳು ಉಪಸ್ಥಿತರಿದ್ದರು.

ಅನ್ನದಾಸೋಹ ಸೇವೆ ಸಲ್ಲಿಸಿದ ಹೆಸರಾಂತ ಲೆಕ್ಕಪರಿಶೋಧಕ ಸದಾಶಿವಪ್ಪ ಮತ್ತು ಲಿಂ.ನಾಗರಾಜು ಧರ್ಮಪತ್ನಿ ಮಮತಾ ನಾಗರಾಜ ಮತ್ತು ಮಕ್ಕಳು ಉಭಯತರರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಸಮಾರಂಭದ ನೇತೃತ್ವವನ್ನು ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ವಹಿಸಿ ಮಾತನಾಡಿದರು. ಹಲವಾರು ಸಂಘ ಸಂಸ್ಥೆ ಮತ್ತು ದಾನಿಗಳಿಗೆ ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ನೆರವೇರಿತು. ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೂಡ್ಲಿಗೆರೆ ಗ್ರಾಮಸ್ಥರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ತಮ್ಮ ಗೌರವ ಸಮರ್ಪಿಸಿದರು.

ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಜನಕಲ್ಯಾಣಕ್ಕಾಗಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದರು. ಸಹಸ್ರಾರು ಭಕ್ತರಿಗೆ ಅನ್ನದಾಸೋಹ ನೆರವೇರಿತು.

Leave A Reply

Your email address will not be published.

error: Content is protected !!