Shivamogga | ಸಚಿವತ್ರಯರಿಂದ ಯುವನಿಧಿ ಕಾರ್ಯಕ್ರಮದ ಸ್ಥಳ ಪರಿಶೀಲನೆ

0 405

ಶಿವಮೊಗ್ಗ : ಜ.12ರಂದು ಫ್ರೀಡಂಪಾರ್ಕ್‌ನಲ್ಲಿ ಯುವನಿಧಿ (Yuvanidhi) ಕಾರ್ಯಕ್ರಮಕ್ಕೆ ಚಾಲನೆಯನ್ನು ಮುಖ್ಯಮಂತ್ರಿಗಳು ನೀಡಲಿದ್ದು, ಈ ಹಿನ್ನಲೆಯಲ್ಲಿ ಸಚಿವತ್ರಯರು ಇಂದು ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ, ಸಚಿವರುಗಳು ವಿದ್ಯಾನಿಧಿ ಯೋಜನೆ ಯುವರಿಗೆ ವರದಾನವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಅದು ಅವರಿಗೆ ಧ್ಯರ್ಯವನ್ನು ಕೊಡುತ್ತದೆ. ಈಗಾಗಲೇ 25 ಸಾವಿರಕ್ಕೂ ಹೆಚ್ಚು ಯುವಕರು ಹೆಸರನ್ನು ನೊಂದಾಯಿಸಿದ್ದಾರೆ ಎಂದರು.
ಸಚಿವ ಶರಣಪ್ರಕಾಶ್ ಪಾಟಿಲ್ ಮಾತನಾಡಿ, ಕೋವಿಡ್‌ನಿಂದ ಯಾರೂ ಆತಂಕ ಪಡಬೇಕಾಗಿಲ್ಲ. ಈಗಾಗಲೇ ಹಲವು ಬಾರಿ ಸಭೆ ನಡೆಸಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಿದ್ದೆವೆ. ಈಗ ಸರ್ಕಾರ ತನ್ನ 5ನೇ ಗ್ಯಾರಂಟಿಯಾದ ಯುವ ನಿಧಿ ಯೋಜನೆ ಶಿವಮೊಗ್ಗದಿಂದಲೇ ಚಾಲನೆ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಸ್ಥಳ ಕೂಡ ಸರಿಯಾಗಿದೆ. ಯಾವುದೇ ತೊಂದರೆ ಇಲ್ಲ ಎಂದರು.


ಮಧು ಬಂಗಾರಪ್ಪ ಮಾತನಾಡಿ, ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ ಶ್ರಮಿಸಲಾಗುತ್ತಿದೆ. ಈ ವರ್ಷದೊಳಗೆ ಯಾರೂ ನೆಲದ ಮೇಲೆ ಕುಳಿತುಕೊಳ್ಳಬಾರದು. ಖಾಸಗಿ ಅನುದಾನಿತ, ಹಾಗೂ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೆಂಚುಗಳ ವ್ಯವಸ್ಥೆಯನ್ನು ಮಾಡಲಾಗುವುದು ಎಂದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡುವುದಾಗಿ ಹೇಳುತ್ತಿದ್ದಾರೆ. ಅವರಿಗೆ ಅದು ಬಿಟ್ಟರೆ ಬೇರೆ ಕೆಲಸವೇ ಇಲ್ಲ. ಇದನ್ನು ಬಿಡಬೇಕು ಎಂದರು.
ಶಿವಮೊಗ್ಗದಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕು ಎಂಬ ಮಹಾದಾಸೆ ನನಗಿತ್ತು. ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿದ್ದಾರೆ. ಇದು ಸಂತೋಷದ ವಿಷಯವಾಗಿದೆ. ಯುವನಿಧಿಯಿಂದ ನಿರುದ್ಯೋಗಿಗಳ ಬದುಕು ಅರಳಿದರೆ ಸಾಕು ಎಂದರು.


ಸಚಿವ ಸುಧಾಕರ್ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಹುಪಾಲು ಬಗೆಹರಿಸಿದ್ದೇವೆ. ಆದರೆ ಅವರ ಖಾಯಂತಿ ಭರವಸೆ ಕಾನೂನು ತೊಡಕಿದೆ. ಆದರೂ ಸಹಾನುಭೂತಿಯಿಂದ ಪರಿಶೀಲನೆ ಮಾಡಲಾಗುವುದು. ಅವರು ಮುಷ್ಕರ ಬಿಟ್ಟು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕಾಲೇಜಿಗೆ ವಾಪಾಸ್ಸಾಗಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ಅನಿವಾರ್ಯವಾಗುತ್ತದೆ ಎಂದರು.


ಕೌಶಲಾಭಿವೃದ್ಧಿ ಇಲಾಖೆ ವತಿಯಿಂದ ನಿರುದ್ಯೋಗಿಗಳಿಗೆ ತರಬೇತು ನೀಡಲಾಗುವುದು. ಈಗಾಗಲೇ ರಾಜ್ಯದಲ್ಲಿ 5 ಸ್ಥಳಗಳನ್ನು ಇದಕ್ಕೆ ಗುರುತಿಸಲಾಗಿದೆ. ಇದರಿಂದ ನಿರುದ್ಯೋಗಿಗಳು ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ ಎಂದ ಅವರು, ಕುಲಪತಿಗಳ ನೇಮಾಕಾತಿಗೆ ಸಂಬಂಧಿಸಿದಂತೆ ಈಗ ಮಾಡಿರುವುದು ತಾತ್ಕಲಿಕ ವ್ಯವಸ್ಥೆಯಾಗಿದೆ. ಕೆಎಎಸ್ ಅಧಿಕಾರಿಗಳನ್ನೇ ಕುಲಸಚಿವರ ಹುದ್ದೆಗೆ ನೇಮಕ ಮಾಡಬೇಕು. ಈ ಬಗ್ಗೆ ರಾಜ್ಯಪಾಲರೊಂದಿಗೆ ಮಾತನಾಡಲಾಗುವುದು ಮತ್ತು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದರೆ, ಅದರ ವರದಿಯನ್ನು ವಿವಿ ಆಂತರಿಕ ವ್ಯವಸ್ಥೆಯಿಂದ ತನಿಖೆ ಮಾಡಿ ವರದಿ ಕಲಿಸಬೇಕು ಎಂದರು.

Leave A Reply

Your email address will not be published.

error: Content is protected !!