ಚುನಾವಣೆಗೂ ಮುನ್ನವೇ ಅಭ್ಯರ್ಥಿ ಗೆಲುವಿನ ಕುರಿತು ಕೋಟಿಗಟ್ಟಲೆ ಬೆಟ್ಟಿಂಗ್ ; ತನ್ನ ಇಡೀ ಆಸ್ತಿಯನ್ನೇ ಬಾಜಿ ಕಟ್ಟಿದ ವ್ಯಕ್ತಿ !

0 45

ಚಿಕ್ಕಮಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಪರವಾಗಿ ವ್ಯಕ್ತಿಯೊಬ್ಬರು ಕೋಟ್ಯಂತರ ರೂ.ಬಾಜಿ ಕಟ್ಟಲು ಮುಂದಾಗಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಬೆಳ್ಳಿ ಪ್ರಕಾಶ್ ಗೆಲುವು ಖಚಿತ. ಈ ಸಂಬಂಧ ಒಂದು ಲಕ್ಷ, ಎರಡು ಲಕ್ಷ ರೂ. ಅಲ್ಲ, ಒಂದು ಕೋಟಿ, ಎರಡು ಕೋಟಿಯೂ ಅಲ್ಲ, ಇಡೀ ನನ್ನ ಸಂಪೂರ್ಣ ಆಸ್ತಿಯನ್ನು ಪಣಕ್ಕಿಡುತ್ತೇನೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೆ ಯಾರು ಬೇಕಾದರೂ ಮುಂದೆ ಬರಬಹುದು ಎಂದು ಸವಾಲು ಹಾಕಿದ್ದಾರೆ.

ಶಾಸಕ ಬೆಳ್ಳಿ ಪ್ರಕಾಶ್ ಮುಂದೇಯೇ ಬಾಜಿಗೆ ಆಹ್ವಾನ: ಕಡೂರು ಕ್ಷೇತ್ರದ ನೀಲೇಗೌಡನ ಕೊಪ್ಪಲು ಗ್ರಾಮದ ನಿವಾಸಿ ಎಸ್.ಬಿ.ಹನುಮಂತಪ್ಪ ಬಾಜಿಗೆ ಆಹ್ವಾನಿಸಿರುವ ವ್ಯಕ್ತಿ. ಗ್ರಾಮದಲ್ಲಿ ನಡೆದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಬೆಳ್ಳಿ ಪ್ರಕಾಶ್ ಎದುರಲ್ಲೇ ಅವರು ಈ ಮಾತುಗಳನ್ನು ಆಡಿದ್ದು, ವಿಡಿಯೋ ಈಗ ವೈರಲ್ ಆಗಿದೆ. ಹನುಮಂತಪ್ಪ ಅವರು ಮೂರು ಕೋಳಿ ಫಾರಂ, ಎರಡು ಎಕರೆ ಜಮೀನು, ಮನೆ ಇನ್ನಿತರೆ ಆಸ್ತಿ, ಪಾಸ್ತಿ ಹೊಂದಿದ್ದಾರೆ.

100 ರೂ ದೇಣಿಗೆ ನೀಡಿದ್ದ ಅಭಿಮಾನಿ:

ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ವೈಎಸ್‌ವಿ.ದತ್ತಾ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿರುವ ನಡುವೆಯೇ ಇಂತಹ ಬೆಟ್ಟಿಂಗ್ ಪ್ರಸ್ತಾಪಗಳು ಆರಂಭವಾಗಿವೆ. ಚುನಾವಣೆ ಬಂತೆಂದರೆ ಪಂಥಾಹ್ವಾನ, ಬಾಜಿ ಕಟ್ಟೋದೆಲ್ಲ ತುಂಬ ಜೋರಾಗುತ್ತದೆ. ಕೆಲವರು ಯಾರೋ ಅಭ್ಯರ್ಥಿ ಮೇಲೆ ಲಕ್ಷಾಂತರ ರೂ. ಬಾಜಿ ಕಟ್ಟುತ್ತಾರೆ, ಇನ್ನು ಕೆಲವರು ಆಸ್ತಿಯನ್ನೇ ಬಾಜಿಗಿಡಲು ಮುಂದಾಗುತ್ತಿದ್ದಾರೆ. ಎಸ್ ಬಿ ಹನುಮಂತಪ್ಪ, ಸುಮಾರು 1 ಕೋಟಿ ಬೆಲೆಬಾಳುವ ಆಸ್ತಿ ಹೊಂದಿದ್ದಾರೆ. ಯಾರು ಬೇಕಾದರೂ ಚಾಲೆಂಜ್ ಮಾಡಬಹುದು. ಚಾಲೆಂಜ್ ಮಾಡೋರು ಬರಲಿ ನನ್ನ ಆಸ್ತಿಯ ಹಕ್ಕುಪತ್ರಕ್ಕೆ ಸಹಿ ಮಾಡಿಕೊಡುತ್ತೇನೆ ಎಂದು ಹನುಮಂತಪ್ಪ ಹೇಳಿದ್ದಾರೆ.

ಇದರ ನಡುವೆ ಮಾಜಿ ಶಾಸಕ ವೈಎಸ್‌ವಿ.ದತ್ತಾಗೆ ಕಡೂರು ಕ್ಷೇತ್ರದಲ್ಲೇ ದತ್ತಾ ಅಭಿಯಾನಿಯೊಬ್ಬರು ಅಂಚೆ ಇಲಾಖೆ ಮೂಲಕ 100 ರೂಪಾಯಿ ದೇಣಿಗೆ ನೀಡಿ ಚುನಾವಣೆಯಲ್ಲಿ ಗೆದ್ದು ಬರುವಂತೆ ಪತ್ರವನ್ನು ಬರೆದಿದ್ದರು. ಇದರ ನಡುವೆ ಇದೀಗ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಪರವಾಗಿ ಹನುಮಂತಪ್ಪನವರು ಕೋಟ್ಯಂತರ ರೂಪಾಯಿ ಆಸ್ತಿಯನ್ನೇ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲದೇ ಇದ್ದರೂ ಇವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

Leave A Reply

Your email address will not be published.

error: Content is protected !!