ಮರಣ ಪ್ರಮಾಣ ಪತ್ರ ಮಾಡಿಕೊಡಲು ಲಂಚದ ಬೇಡಿಕೆ ; ಇಬ್ಬರು ಲೋಕಾಯುಕ್ತ ಬಲೆಗೆ

0 64

ಚಿಕ್ಕಮಗಳೂರು : ಗಂಡನ ಮರಣ ಪ್ರಮಾಣ ಪತ್ರ ಮಾಡಿಕೊಡಲು ಮಹಿಳೆಯಿಂದ 12 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲ್ಲೂಕು ಕಚೇರಿಯ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಮತ್ತು ಕಂಪ್ಯೂಟರ್ ಆಪರೇಟರ್‌ ಜೀವನ್ ಅವರು 5 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಆದಿಶಕ್ತಿ ನಗರದ ಕೂಲಿ ಕಾರ್ಮಿಕರಾದ ತಾಜ್ ಅವರ ಪತಿ ಮಂಜುನಾಥ್ ಅವರು 2022ರ ಡಿಸೆಂಬರ್ 19ರಂದು ನಿಧನರಾಗಿದ್ದು, ಈ ಕುರಿತ ಮರಣ ಪ್ರಮಾಣಪತ್ರ ಕೋರಿ ತಾಲ್ಲೂಕು ಕಚೇರಿಗೆ ತಾಜ್ ಅವರು ಅರ್ಜಿ ಸಲ್ಲಿಸಿದ್ದರು.

ಆ.2ರಂದು ತಾಜ್ ಅವರಿಗೆ ಕರೆ ಮಾಡಿದ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್, ಗಂಡನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಕಚೇರಿಗೆ ಬರಲು ತಿಳಿಸಿದ್ದರು. ಪ್ರಮಾಣ ಪತ್ರ ನೀಡಲು 12 ಸಾವಿರ ರೂ‌. ಖರ್ಚಾಗುತ್ತದೆ ಎಂದು ತಿಳಿಸಿದ್ದರು. ಹಣ ಪಡೆದು ಪ್ರಮಾಣ ಪತ್ರ ವಿತರಿಸುವಂತೆ ಕಂಪ್ಯೂಟರ್ ಆಪರೇಟರ್ ಜೀವನ್ ಅವರಿಗೂ ಸೂಚಿಸಿದ್ದರು ಎಂದು ತಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಹಣ ಕೇಳಿದ್ದರೆ ಬಗ್ಗೆ ಧ್ವನಿ ಮುದ್ರಿತ ದಾಖಲೆಯನ್ನೂ ಒದಗಿಸಿದ್ದರು.

ಮರು ದಿನ (ಗುರುವಾರ) ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅನಿಲ್ ರಾಥೋಡ್‌ ನೇತೃತ್ವದ ಪೊಲೀಸರ ತಂಡ, ಆರೋಪಿಗಳನ್ನು ಬಂಧಿಸಿದ್ದಾರೆ. 5 ಸಾವಿರ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ತಿರುಮಲೇಶ್ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!