ಲೋಕಸಭಾ ಚುನಾವಣೆ | ಏ.26ಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಮತದಾನ

0 186

ಚಿಕ್ಕಮಗಳೂರು: ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆ-2024ನ್ನು ಘೋಷಣೆ ಮಾಡಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಾದ್ಯಂತ ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನೀತಿ ಸಂಹಿತೆಯನ್ನು ಪ್ರತಿಯೊಂದು ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾರ್ಚ್ 28 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 04 ಕೊನೆಯ ದಿನವಾಗಿದ್ದು, ಏಪ್ರಿಲ್ 05 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 08 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏಪ್ರಿಲ್ 26 ಕ್ಕೆ ಮತದಾನ ನಡೆಯಲಿದ್ದು, ಜೂನ್ 04 ಕ್ಕೆ ಮತ ಎಣಿಕೆ ನಡೆಯಲಿದೆ. ಜೂನ್ 06 ಕ್ಕೆ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗುತ್ತದೆ ಎಂದು ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಒಟ್ಟು 15,72,958 ಮತದಾರರಿದ್ದಾರೆ. ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಾಲ್ಲೂಕುಗಳು ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 8,12,157, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಸೇರಿದಂತೆ ನಾಲ್ಕು ತಾಲ್ಲೂಕುಗಳಲ್ಲಿ 7,60,801 ಮತದಾರರಿದ್ದಾರೆ. ಕಡೂರು ತಾಲ್ಲೂಕು ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು, 2,07,134 ಮತದಾರರಿದ್ದು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ ಎಂದರು.

ಮಾದರಿ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿರುವುದರಿಂದ ರಾಜಕೀಯ ಸಭೆ ಸಮಾರಂಭಕ್ಕೆ ಪರವಾನಗಿ ಕಡ್ಡಾಯವಾಗಿದೆ. ಜಿಲ್ಲಾಧಿಕಾರಿಗಳ ಕಛೇರಿ ಅಥವಾ ತಾಲ್ಲೂಕು ಮಟ್ಟದಲ್ಲಿ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅಥವಾ ಸುವಿಧಾ ಮೂಲಕ ಪರವಾನಗಿ ಪಡೆಯಬೇಕು. ಅತಿಥಿ ಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಪ್ರವಾಸ ಮಂದಿರ ನಿಷೇಧಿಸಲಾಗಿದೆ. ಮತದಾರರ ಮೇಲೆ ಪ್ರಭಾವ ಬೀರುವ ಸರ್ಕಾರಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುವುದು ಆದರೆ ಕುಡಿಯುವ ನೀರು, ಬರ ಪರಿಹಾರ ಕಾರ್ಯಗಳು ಎಂದಿನಂತೆ ನಡೆಯಲಿದೆ. ಇದಕ್ಕೆ ಅಡ್ಡಿಯಿಲ್ಲ ಎಂದು ಹೇಳಿದ ಅವರು. ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳ ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾರ‍್ಸ್, ಭಿತ್ತಿಪತ್ರ ಹಾಗೂ ಕಟೌಟ್‌ಗಳನ್ನು ತೆರವುಗೊಳಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದ ಅವರು ಇದುವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸದವರು ನಾಮಪತ್ರ ಸಲ್ಲಿಕೆ ಕೊನೆಯ ದಿನಾಂಕದ ಹತ್ತು ದಿನಗಳ ಮುಂಚಿತವಾಗಿ ಆನ್‌ಲೈನ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದ ಅವರು 85 ವರ್ಷ ಮೇಲ್ಪಟ್ಟ ವಯೋವೃದ್ಧರು, ವಿಶೇಷ ಚೇತನರಿಗೆ ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತಹ ಮತದಾರರ ಮನೆಗೆ 12-ಡಿ ನಮೂನೆ ನೀಡಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆ ಅಕ್ರಮ ಎಂ.ಸಿ.ಸಿ. ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಏನೇ ದೂರುಗಳಿದ್ದಲ್ಲಿ ಸಿ-ವಿಜಿಲ್ ತಂತ್ರಾಂಶ ಮತ್ತು 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರುಸಲ್ಲಿಸಬಹುದಾಗಿದೆ. ವಿವಿಧ ತಂಡಗಳು ತಪಾಸಣೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಹಣ, ಇತರೆ ಬೆಲೆಬಾಳುವ ವಸ್ತುಗಳ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನೇತೃತ್ವದಲ್ಲಿ ಕ್ಯಾಶ್ ರಿಡ್ರೆಸಲ್ ಸಮಿತಿ ರಚಿಸಲಾಗಿದೆ ಎಂದರು.

ಬಂದೂಕುಗಳ ಶಸ್ತ್ರ/ಆಯುಧಗಳ ಠೇವಣೆಗೆ ಸೂಚನೆ :
ಜಿಲ್ಲೆಯಾದ್ಯಂತ ಪರವಾನಗಿ ಹೊಂದಿರುವ ಹತ್ತು ಸಾವಿರಕ್ಕೂ ಹೆಚ್ಚು ಬಂದೂಕುಗಳ ಸನ್ನದುದಾರರಿದ್ದು, ಬಂದೂಕುಗಳನ್ನು ತಮ್ಮ ವ್ಯಾಪ್ತಿಯ ಸಂಬಂಧಿಸಿದ ಪೊಲೀಸ್ ಠಾಣೆಗೆ ಕೂಡಲೇ ಒಪ್ಪಿಸುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮಾತನಾಡಿ, ಜಿಲ್ಲೆಯಾದ್ಯಂತ ಮುಕ್ತ ಮತ್ತು ನ್ಯಾಯ ಸಮ್ಮತ ಹಾಗೂ ನಿರ್ಭೀತಿಯಿಂದ ಮತದಾನ ಮಾಡಲು ಸೂಕ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗುತ್ತದೆ. ಈಗಾಗಲೇ ಸಿಆರ್‌ಪಿಎಫ್ ಬೆಟಾಲಿಯನ್‌ನ ಒಂದು ತಂಡ ಜಿಲ್ಲೆಗೆ ಆಗಮಿಸಿದೆ. ವಿಶೇಷವಾಗಿ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಆಕ್ಷೇಪಾರ್ಹ ಅಂಶಗಳ ಬಗ್ಗೆ ಪ್ರಸಾರ ಮಾಡಿದ್ದಲ್ಲಿ ಕಾನೂನು ರೀತಿಯ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಜಿಲ್ಲೆಯ ಗಡಿ ಭಾಗಗಳಲ್ಲಿ 22 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಮಾದರಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲ್ಲುವಾಗಿ ಖರ್ಚು ವೆಚ್ಚಗಳ ತಂಡ, ಪ್ಲೇಯಿಂಗ್ ಸ್ಕ್ವಾಡ್ ತಂಡ, ವಿಎಸ್‌ಟಿ ತಂಡ, ವಿವಿಟಿ ತಂಡಗಳನ್ನು ರಚಿಸಲಾಗಿದೆ ಎಂದರು.

ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ ಜಿಲ್ಲೆಯಾದ್ಯಂತ ಕಳೆದ ಆರು ತಿಂಗಳಿನಿಂದ ಮತದಾರರಲ್ಲಿ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುವ ಕುರಿತು ಹಾಗೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಾಗಿದೆ. ಇದೀಗ ಚುನಾವಣೆ ಘೋಷಣೆಯಾಗಿದ್ದರಿಂದ ಸ್ವೀಪ್ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು. ವಿಶೇಷವಾಗಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿದ್ದು, ಇಲ್ಲಿ ಮತದಾನ ಪ್ರಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕನಕರಡ್ಡಿ ನಾರಾಯಣರಡ್ಡಿ ಹಾಜರಿದ್ದರು.

Leave A Reply

Your email address will not be published.

error: Content is protected !!