ಬದುಕನ್ನು ಪರಿಶುದ್ಧಗೊಳಿಸುವುದೇ ಸತ್ಪುರುಷರ ಗುರಿ ; ಶ್ರೀ ರಂಭಾಪುರಿ ಜಗದ್ಗುರುಗಳು

0 42

ಎನ್.ಆರ್.ಪುರ: ಆಗ ಬಾಳಿನ ನಿಜವಾದ ಸಂಪತ್ತು ಸಂಸ್ಕಾರ. ಸಂಸ್ಕಾರ ಸಂಸ್ಕೃತಿಯಿಲ್ಲದ ಮಾನವ ಜೀವನ ವ್ಯರ್ಥ. ಮಾನವೀಯತೆಯಿಂದ ದೈವತ್ವಕ್ಕೆ ಕರೆದೊಯ್ಯುವ ಮಾರ್ಗವೇ ಸಂಸ್ಕೃತಿ. ಮನುಷ್ಯನ ಬದುಕನ್ನು ಪರಿಶುದ್ಧಗೊಳಿಸುವುದೇ ಸತ್ಪುರುಷರ ಗುರಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಶ್ರಾವಣ ಪೂಜಾ ತಪೋನುಷ್ಠಾನ ಹಾಗೂ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನ ಸುಖ ದುಃಖಗಳ ಸಂಕಲನ. ಸುಖ ದು:ಖಗಳನ್ನು ಸಮಾನವಾಗಿ ಕಂಡು ನಡೆಯುವ ವ್ಯಕ್ತಿ ಜೀವನದಲ್ಲಿ ಶ್ರೇಯಸ್ಸನ್ನು ಕಾಣಬಲ್ಲ. ಒಡಕಿನಿಂದ ಧರ್ಮ ಸುಖ ಶಾಂತಿ ಮತ್ತು ಗೌರವಗಳು ಮಣ್ಣು ಪಾಲಾಗುವವು. ಆದರ್ಶ ವಿಚಾರಗಳನ್ನು ಅಳವಡಿಸಿಕೊಂಡು ಬಾಳಲು ಸತ್ಪುರುಷರ ಮಾರ್ಗದರ್ಶನ ಅವಶ್ಯಕವಾಗಿದೆ. ಮನುಷ್ಯ ಲೌಕಿಕ ಮತ್ತು ಪಾರಮಾರ್ಥಿಕಗಳೆರಡನ್ನು ಅನುಸರಿಸಿ ಬಾಳಬೇಕಾಗುತ್ತದೆ. ಇವುಗಳನ್ನು ಅರಿತು ಬಾಳಲೆಂದೇ ಧರ್ಮ, ದೇವರು ಮತ್ತು ಗುರು ಮಾರ್ಗದರ್ಶನ ಮನುಷ್ಯನ ಜೀವನದಲ್ಲಿ ಹೊಸ ಬೆಳಕು ಮೂಡಿಸುತ್ತದೆ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ. ಮನುಷ್ಯ ಆಸ್ತಿ ಅಧಿಕಾರ ಕಳೆದುಕೊಂಡಾಗ ಬಡವನಾಗುವುದಿಲ್ಲ. ಆದರೆ ಆತ್ಮೀಯರನ್ನು ಕಳೆದುಕೊಂಡಾಗ ಬಡವನಾಗುತ್ತಾನೆ. ನಿಂತ ನೀರಿನಲ್ಲಿ ಕ್ರಿಮಿಗಳು ಹುಟ್ಟುವಂತೆ ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಹುಟ್ಟುತ್ತವೆ. ಸತ್ಯ ಶುದ್ಧ ಧರ್ಮ ದಾರಿಯಲ್ಲಿ ನಡೆದರೆ ಬಾಳು ಉಜ್ವಲಗೊಳ್ಳುವುದೆಂದರು.

ಇದೇ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಆಲೂರು ಹಿರೇಮಠದಿಂದ ಮುದ್ರಣಗೊಂಡ ಶ್ರೀ ಉಜ್ಜಯಿನಿ ಜಗದ್ಗುರು ಮರುಳಸಿದ್ಧೇಶ್ವರ ಲೀಲಾಮೃತ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಮಾಡಿದ ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯನಿಗೆ ಎಷ್ಟು ಗಳಿಸಿದರೂ ತೃಪ್ತಿಯಿರುವುದಿಲ್ಲ. ಮನುಷ್ಯನಿಗೆ ಸಂಪತ್ತಿನಿಂದ ಶಾಂತಿ ಸಿಗುವುದಿಲ್ಲ. ಅಧಿಕಾರ ಅಂತಸ್ತಿನಿಂದ ಸಂತೃಪ್ತಿ ಸಿಗುವುದಿಲ್ಲ. ಆಚಾರ್ಯರ ಋಷಿಮುನಿಗಳ ಮೌಲ್ಯ ತುಂಬಿದ ಮಾತುಗಳು ಬದುಕಿಗೆ ಉನ್ನತಿಯನ್ನು ತಂದು ಕೊಡಬಲ್ಲವು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವ ಶಾಂತಿ ಸಂದೇಶ ಸಾಮರಸ್ಯ ಬದುಕಿಗೆ ಬಹು ದೊಡ್ಡ ಶಕ್ತಿ ಎಂದರು.


ಈ ಪವಿತ್ರ ಸಮಾರಂಭದಲ್ಲಿ ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು, ಬೀರೂರಿನ ರುದ್ರಮುನಿ ಶಿವಾಚಾರ್ಯರು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಪಾಲ್ಗೊಂಡು ನುಡಿನಮನ ಸಲ್ಲಿಸಿದರು. ದೇವರ ಹಿಪ್ಪರಗಿ ಸದಯ್ಯನಮಠದ ಶ್ರೀಗಳು, ಕೂಡ್ಲಿಗಿ ತಾಲೂಕ ಆಲೂರು ನಿರಂಜನ ದೇವರು, ಸಿದ್ಧಲಿಂಗಯ್ಯಸ್ವಾಮಿ, ಬುಕ್ಕಾಂಬುಧಿ ಎಸ್.ಎಂ.ವೀರಭದ್ರಪ್ಪ, ಲಿಂಗಸುಗೂರಿನ ಶಿವಕುಮಾರ ನಂದಿಕೋಲಮಠ, ಆಸಂದಿ ರುದ್ರಯ್ಯನವರು, ಬಾಬುಗೌಡ ವದ್ದಲ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಗುರಕುಲ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.
ಪ್ರಾತಃಕಾಲ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆಗಳು ಜರುಗಿದವು.

Leave A Reply

Your email address will not be published.

error: Content is protected !!