ಹುಯ್ಯೋ ಹುಯ್ಯೋ ಮಳೆರಾಯ ಇಲ್ಲಿ ಯಾವ್ ಬೆಳೆಗೂ ನೀರಿಲ್ಲ ! ಅನ್ನದಾತನಿಂದ ವರುಣನಿಗಾಗಿ ಪ್ರಾರ್ಥನೆ

0 72

ರಿಪ್ಪನ್‌ಪೇಟೆ : ಈ ಬಾರಿ ಕೈಕೊಟ್ಟ ಆಶ್ಲೇಷ, ಮಘಾ ಮಳೆಯಿಂದಾಗಿ ಮಲೆನಾಡಿನ ನಡುಮನೆಯಾದ ಹೊಸನಗರ ತಾಲೂಕಿನ ರೈತ ಸಮೂಹದಲ್ಲಿ ಆತಂಕ ಮನೆ ಮಾಡಿದ್ದು ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ.

ಮುಂದೇನು ಎಂಬ ಚಿಂತೆ :

ಒಂದು ತಿಂಗಳಿನಿಂದ ಬೇಸಿಗೆಯಂಥ ಸುಡು ಬಿಸಿಲಿನ ವಾತಾರಣ ಇರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಹಳ್ಳ ತೊರೆಗಳು ಬತ್ತಿ ಹೋಗಿವೆ. ಕೆರೆಗಳಲ್ಲೂ ನೀರು ಖಾಲಿಯಾಗುತ್ತಿದೆ. ಆಗಸ್ಟ್‌ನಲ್ಲೇ ಈ ಸ್ಥಿತಿಯಾದರೆ ಮುಂದೇನು ಎಂಬ ಚಿಂತೆ ಕೃಷಿಕರಲ್ಲಿ ಕಾಡುವಂತಾಗಿದೆ.

ನೀರಿಲ್ಲದೆ ಬಿರುಕು ಬಿಟ್ಟಿರುವ ನಾಟಿ ಮಾಡಿದ ಭತ್ತದ ಗದ್ದೆಗಳು.

ಕಾಡು ಪ್ರಾಣಿಗಳ ಕಾಟ :

ಈಗಾಗಲೇ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಬೈರಾಪುರ ಮಜರೆ ಗ್ರಾಮದ ಮಂಜುನಾಥ ಭಂಡಾರಿ ಎಂಬ ರೈತ ನಾಟಿ ಮಾಡಿದ ಭತ್ತದ ಗದ್ದೆಗೆ ಜಿಂಕೆಗಳೊಂದಿಗೆ ಕಾಡು ಪ್ರಾಣಿಗಳ ಕಾಟದಿಂದಾಗಿ ಭತ್ತದ ನಾಟಿಗದ್ದೆ ಆಹುತಿಯಾಗುತ್ತಿದ್ದರೆ ಮಳೆ ಬಾರದ ಕಾರಣ ಭತ್ತ, ಮುಸುಕಿನಜೋಳ, ಅಡಿಕೆ, ಶುಂಠಿ, ಕಬ್ಬು, ಬಾಳೆ, ಕಾಳುಮೆಣಸು ಇನ್ನಿತರ ಬೆಳೆಗಳು ಒಣಗುವಂತಾಗಿದ್ದು ರೈತರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.

ಬತ್ತಿದ ಜಲಮೂಲಗಳು :

ಹೊಸನಗರ ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗೂ ಸಂಚಕಾರ ಎದುರಾಗಿದೆ. ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಒಣಗಿ ಹೋಗಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಹಲವು ಪ್ರದೇಶಗಳಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ಕೆಲವೆಡೆ ಸಸಿಮಡಿಗಳು ಹಾಗೆಯೇ ಉಳಿದಿದ್ದು, ನಾಟಿ ಕಾರ್ಯವನ್ನೇ ಕೈ ಬಿಡಲಾಗಿದೆ.

ಹುಂಚ ಮತ್ತು ಕೆರೆಹಳ್ಳಿ ಹೋಬಳಿಯ ಕೋಡೂರು, ಹುಂಚ, ಅಮೃತ, ಹೆದ್ದಾರಿಪುರ, ಕೆರೆಹಳ್ಳಿ, ಗವಟೂರು, ಅರಸಾಳು, ಕೆಂಚನಾಲ, ಬೆಳ್ಳೂರು, ಬಸವಾಪುರ, ಬುಕ್ಕಿವರೆ, ದೋಬೈಲು, ಬರುವೆ, ಮುಡುಬ, ಬೈರಾಪುರ, ತಮ್ಮಡಿಕೊಪ್ಪ, ಆಲವಳ್ಳಿ, ಮಸರೂರು ಬಾಳೂರು, ನೆವಟೂರು, ಚಂದಳ್ಳಿ, ಮಾದಾಪುರ, ಕುಕ್ಕಳಲೇ, ನೇರಲುಮನೆ, ಹರತಾಳು, ಹರಿದ್ರಾವತಿ, ಮಾರುತಿಪುರ ಚಿಕ್ಕಜೇನಿ, ಹಾರೋಹಿತ್ತಲು, ಮಳವಳ್ಳಿ, ಕೊಳವಳ್ಳಿ, ಕೋಟೆತಾರಿಗ, ನಾಗರಹಳ್ಳಿ, ಶೆಟ್ಟಿಬೈಲು, ಆನೆಗದ್ದೆ, ಬಿದರಹಳ್ಳಿ, ಕಮ್ಮಚ್ಚಿ, ಅಮೃತ, ಸೊನಲೆ, ಬೇಹಳ್ಳಿ, ಬೈಂದೂರು, ಸುರಳಿಕೊಪ್ಪ, ಮಳಲಿಕೊಪ್ಪ, ಹುಗುಡಿ, ಹಿಂಡ್ಲೆಮನೆ, ಕರಿಗೆರಸು, ಕಲ್ಲುಕೊಪ್ಪ, ಕೆರಗೋಡು, ಶಿವಪುರ, ಹುಳಿಗದ್ದೆ, ಸಂಪಳ್ಳಿ ಇನ್ನಿತರ ಗ್ರಾಮಗಳಲ್ಲಿ ರೈತರು ಬೋರ್‌ವೆಲ್ ನೀರು ಹರಿಸಿ ಸಕಾಲದಲ್ಲಿ ನಾಟಿ ಮಾಡಿಕೊಂಡು ಮುಗಿಲು ನೋಡುವಂತಾಗಿದ್ದರೆ, ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಯನ್ನು ಜಿಂಕೆ, ಕಾಡುಕೋಣ, ನವಿಲು, ಇನ್ನಿತರ ಕಾಡು ಪ್ರಾಣಿಗಳಿಂದಾಗಿ ಬೆಳೆ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ.

ಬೈರಾಪುರ ಮಜರೆ ಗ್ರಾಮದ ಮಂಜುನಾಥ ಭಂಡಾರಿ ಎಂಬ ರೈತ ನಾಟಿ ಮಾಡಿದ ಭತ್ತದ ಗದ್ದೆಗಳನ್ನು ಜಿಂಕೆಗಳು ತಿಂದಿರುವುದು.

ಒಂದು ಕಡೆ ಮಳೆಯಿಲ್ಲದೆ ಬೆಳೆಗೆ ನೀರು ಇಲ್ಲದೆ ಒಣಗುವಂತಾಗಿದ್ದು ಇನ್ನೊಂದು ಕಡೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ರೈತರು ಕಾಲಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಮಲೆನಾಡಿನಲ್ಲಿ ಜೂನ್ 10 ರಿಂದ ಮಳೆ ಆರಂಭವಾಗಬೇಕಾದ ಮುಂಗಾರು ಮಳೆ ವಿಫಲವಾದರೂ ಜುಲೈ ಆರಂಭದಿಂದ ಮಳೆ ಬಿರುಸು ಕಂಡಿತ್ತು ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಮಾಯವಾಗಿ ಬಿಸಿಲ ಝಳ ಜೋರಾಗಿ ಅಂತರ್ಜಲದ ಕೊರತೆ ಭತ್ತದ ಬೆಳೆಯ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ.

889 ಮಿ.ಮೀ. ಮಳೆ ಕೊರತೆ :

ತಾಲ್ಲೂಕಿನಲ್ಲಿ ವಾಡಿಕೆ ಮಳೆ 2.541 ಮಿ.ಮೀ. ಇದುವರೆಗೆ 1652 ಮಿ.ಮೀ.ಮಳೆಯಾಗಿದ್ದು 889 ಮಿ.ಮೀ. ಮಳೆ ಕೊರತೆ ಕಂಡು ಬಂದಿದೆ. ತಾಲ್ಲೂಕಿನಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು ರೈತರು ಅಡಿಕೆ, ಶುಂಠಿ, ಭತ್ತ, ಮೆಕ್ಕಜೋಳ ನೀರಿಲ್ಲದೆ ಒಣಗುತ್ತಿದ್ದು ತೆರೆದ ಮತ್ತು ಕೊಳವೆ ಬಾವಿಯಲ್ಲಿ ಸಹ ನೀರು ಇಲ್ಲದೆ ಇದ್ದು ಕೆಲವೇ ದಿನಗಳಲ್ಲಿ ಬಿಸಿಲು ಹೀಗೆ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗುವುದೆಂದು ಹಿರಿಯರಾದ ಟಿ.ಆರ್.ಕೃಷ್ಣಪ್ಪ, ರತೇಶ್ವರಪ್ಪಗೌಡ, ಬಿ.ಎಸ್.ಪುರುಷೋತ್ತಮ್‌ರಾವ್, ಜಿ.ಎಂ. ದುಂಡರಾಜ್‌ಗೌಡ, ಕೆ.ಆರ್. ಭೀಮರಾಜ್‌ಗೌಡ, ಡಿ.ಸಿ. ಈಶ್ವರಪ್ಪಗೌಡ, ಎಂ.ಆರ್. ಶಾಂತವೀರಪ್ಪಗೌಡ, ತಾತೇಶ್ವರಪ್ಪಗೌಡ ಬೆಳಂದೂರು, ಪುಟ್ಟಸ್ವಾಮಿಗೌಡರು ಬೆಳಂದೂರು ಇವರು ಮಾಧ್ಯಮದವರ ಬಳಿ ತಮ್ಮ ಕಳವಳ ವ್ಯಕ್ತಪಡಿಸಿದರು.

ವಿಶೇಷ ವರದಿ : ಮಹೇಶ ಹಿಂಡ್ಲೆಮನೆ

Leave A Reply

Your email address will not be published.

error: Content is protected !!