ಬಿಜೆಪಿಗೆ ಆಯನೂರು ಮಂಜುನಾಥ್ ಗುಡ್ ಬೈ ; ಜೆಡಿಎಸ್‌ನಿಂದ ನಾಳೆ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ಕರ್ನಾಟಕ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂಬಂಧ ಬಿಜೆಪಿಯಲ್ಲಿ ಬಂಡಾಯ ಜೋರಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ಒಬ್ಬೊಬ್ಬರೇ ಪ್ರಭಾವಿ ನಾಯಕರು ಬಿಜೆಪಿ ತೊರೆಯುತ್ತಿದ್ದಾರೆ. ಇದೀಗ ಶಿವಮೊಗ್ಗದ ಬಿಜೆಪಿ ನಾಯಕ ಆಯನೂರು ಮಂಜುನಾಥ್ ವಿಧಾನಪರಿಷತ್ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಆಯನೂರು ಮಂಜುನಾಥ್ ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಆದರೂ ಟಿಕೆಟ್ ಸಿಗುವುದು ಖಾತ್ರಿ ಇಲ್ಲದಿರುವುದರಿಂದ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಚುನಾವಣೆಗೂ ಮೊದಲೇ ಶಿವಮೊಗ್ಗದಲ್ಲಿ ಬಿಜೆಪಿಗೆ ಬಿಗ್ ಶಾಕ್ ಆಗಿದೆ. ನಿನ್ನೆ ಮಧ್ಯಾಹ್ನ ಕುಮಾರಸ್ವಾಮಿ, ಎಂ ಶ್ರೀಕಾಂತ್ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದಾರೆ.

ಶಿವಮೊಗ್ಗದಲ್ಲಿಂದು ಬೆಳಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಯನೂರು ಮಂಜುನಾಥ್, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೇನೆ. ಇಂದು ಮಧ್ಯಾಹ್ನ ಹುಬ್ಬಳ್ಳಿಗೆ ತೆರಳಿ ಸಭಾಪತಿಗಳನ್ನು ಭೇಟಿಯಾಗಿ ರಾಜೀನಾಮೆ ನೀಡುವೆ. ಅಲ್ಲದೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.

ಶ್ರಮಿಕವರ್ಗ, ತುಳಿತಕ್ಕೆ ಒಳಗಾದವರ ಪರವಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದೇನೆ. ಈ ಸಮೂಹದ ಬಗ್ಗೆ ವಿಧಾನಪರಿಷತ್ತಿನಲ್ಲಿ ಪ್ರಸ್ತಾವ ಆಗಿದ್ದೇ ಕಡಿಮೆ. ಹೀಗಾಗಿ, ಎಲ್ಲರ ಅನುಮತಿ ಪಡೆದು ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮೇಲೆ ಭರವಸೆ, ವಿಶ್ವಾಸವಿಟ್ಟು ನನ್ನನ್ನು ಬೆಂಬಲಿಸಲಿದೆ ಎಂದಿದ್ದಾರೆ. ಶಿವಮೊಗ್ಗ ತನ್ನ ಶಾಂತ ಪರಂಪರೆ ಕಳೆದುಕೊಳ್ಳುತ್ತಿರುವ ಆತಂಕವಿದೆ. ಇಂಥ ಸ್ಥಿತಿ ನಿರ್ಮಿಸುವವರ ವಿರುದ್ಧ ನನ್ನ ಸ್ಪರ್ಧೆಯಾಗಿದ್ದು, ಶಾಂತಿಪ್ರಿಯರಾದ ಜನ ನನ್ನ ಜೊತೆ ಇದ್ದಾರೆ. ಸೌಹಾರ್ದದ ನಿಲುವಿಗೆ ಬೆಂಬಲಿಸಬೇಕೆಂಬ ವಿನಂತಿ ಮಾಡುತ್ತೇನೆ. ಶಿವಮೊಗ್ಗದಲ್ಲಿ ಭಯಭೀತ ಸ್ಥಿತಿ. ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ನಗರಕ್ಕೆ ಅಪಖ್ಯಾತಿ ಬಂದಿದೆ. ಗಲಭೆ ನಿಯಂತ್ರಣ ಮುಖ್ಯವಾಗಿದೆ ಎಂದರು.

ಪದವೀಧರ ಕ್ಷೇತ್ರದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು, ಕುಬೇರರ ಮುಂದೆ ಸ್ಪರ್ಧೆ ಮಾಡುತ್ತಿದ್ದೇನೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಜವಾಬ್ದಾರಿಯೊಂದಿಗೆ ಕಣಕ್ಕಿಳಿಯಲಿದ್ದು, ಜಾತಿ ಆಧಾರ ಇಲ್ಲದೇ, ಹಣದ ಸಹಾಯ ಇಲ್ಲದೇ ಸ್ಪರ್ಧೆ ಮಾಡುತ್ತೇನೆ ಎಂದರು.
ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ನನ್ನ ನಾಯಕರು. ಅವರ ವಿರುದ್ದ ಆಪಾದನೆ ಬಂದಾಗ ಅವರನ್ನು ಒಬ್ಬನೇ ಒಬ್ಬ ನಾಯಕ ಸಮರ್ಥನೆ ಮಾಡಿಕೊಳ್ಳಲಿಲ್ಲ. ಆದರೆ ನಾನು ಸಮರ್ಥನೆ ಮಾಡಿಕೊಂಡೆ ಎಂದು ಪತ್ರಕರ್ತರ ಪ್ರಶ್ನೆಗೆ ಆಯನೂರು ಮಂಜುನಾಥ್ ಉತ್ತರಿಸಿದರು.

ಶೋಕಾಸ್ ನೋಟೀಸ್ ಬಗ್ಗೆ ಮಾತನಾಡಿದ ಅವರು ಮಾಜಿ ಮಂತ್ರಿ ಶಾಸಕರು ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ನೋಟೀಸ್ ನೀಡಿದ್ದೀರಾ.? ನಗರಪಾಲಿಕೆ ಹಗರಣಗಳ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ? ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದವರಿಗೆ ನೀವು ನೋಟೀಸ್ ನೀಡಿಲ್ಲ. ಇನ್ನು ನನ್ನ ಉತ್ತರಕ್ಕಾಗಿ ಆ ಪಕ್ಷ ಯಾವ ನೈತಿಕತೆ ಇಟ್ಟುಕೊಂಡಿದೆ ಎಂದು ಮಾರ್ಮಿಕವಾಗಿ ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Articles

error: Content is protected !!