ಅ.08 ರಂದು ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜುರವರಿಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ಪ್ರದಾನ ಸಮಾರಂಭ

0 175

ಶಿವಮೊಗ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಅ.8ರಂದು ಬೆಳಿಗ್ಗೆ 10-30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಕೆಳದಿ ಶಿವಪ್ಪನಾಯಕ ಪ್ರಶಸ್ತಿಯನ್ನು ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಅವರಿಗೆ ನೀಡಲಾಗಿದೆ. ಇವರು ಭಾರತೀಯ ಸೈನ್ಯದ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ಆಗಿದ್ದಾರೆ. ಸೈನ್ಯದ ಹಲವು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿ ಉತ್ಕೃಷ್ಟ ಸೇವೆ ಸಲ್ಲಿಸಿದ್ದ ರಾಜು, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದವರು ಎಂದರು.


ಭಾರತೀಯ ಸೇನೆಯಲ್ಲಿ 39 ವರ್ಷಗಳ ಸೇವೆ ಸಲ್ಲಿಸಿರುವ ರಾಜು, ಕೇವಲ ಭೂಸೇನೆ ಅಲ್ಲದೆ ವಾಯುಸೇನೆಯಲ್ಲಿಯೂ ಕೂಡ ಕಾರ್ಯಾಚರಣೆ ಮಾಡಿದ್ದಾರೆ. ಕಾಶ್ಮೀರದ ದೇಶ ವಿರೋಧಿ ಕೃತ್ಯಗಳಿಗೆ ದಾಳವಾಗುತ್ತಿದ್ದ ಯುವಪೀಳಿಗೆಯನ್ನು ಮನವೊಲಿಸಿ ಸರಿದಾರಿಗೆ ತಂದಿದ್ದಾರೆ. ಭೂತಾನ್ ದೇಶದ ಭಾರತೀಯ ಮಿಲಿಟರಿ ತರಬೇತಿ ತಂಡದ ಕಮಾಂಡೆಂಟ್ ಆಗಿಯೂ ಕೆಲಸ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು.
ನೆರೆ ರಾಷ್ಟçದ ವೈರಿಗಳ ವಿರುದ್ಧ ಕಾದಾಡಿ ಶತ್ರುಗಳನ್ನು ಸದೆಬಡಿಯುವಲ್ಲಿ ಸಾಫಲ್ಯ ಕಂಡಿದ್ದಾರೆ. ಭಾರತದ ರಾಷ್ಟçಪತಿಗಳಿಂದ ಉತ್ತಮ ಯದ್ಧ ಸೇವಾ ಪದಕ, ಅತಿವಿಶಿಷ್ಟ ಸೇವಾಪದಕ, ಸೇನಾಪದಕಗಳನ್ನು ಗಳಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಸನ್ಮಾನಿಸುತ್ತಿರುವುದು ಮತ್ತು ಅವರಿಗೆ ಕೆಳದಿ ಶಿವಪ್ಪ ನಾಯಕ ಪ್ರಶಸ್ತಿ ನೀಡಿರುವುದು ನಮ್ಮ ಗೌರವ ಹೆಚ್ಚಿಸಿದೆ ಎಂದರು.


ಪ್ರಶಸ್ತಿ ಪ್ರದಾನ ಸಮಾರಂಭದ ಜೊತೆಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 220 ಮಕ್ಕಳನ್ನು ಅಭಿನಂದಿಸುವುದರ ಜೊತೆಗೆ ತಲಾ 2ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.


ಕಾರ್ಯಕ್ರಮದಲ ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜು ಮುರುಘರಾಜೇಂದರ ಸ್ವಾಮೀಜಿ ಮತ್ತು ಬಸವಕೇಂದ್ರದ ಮರುಳಸಿದ್ದಸ್ವಾಮೀಜಿ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಸಂಸದ ಬಿ.ವೈ. ರಾಘವೇಂದ್ರ.ಮಹಾಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ, ಶಾಸಕರುಗಳಾದ ಬಿ.ಕೆ. ಸಂಗಮೇಶ್, ಬಿ.ವೈ. ವಿಜಯೇಂದ್ರ, ಎಸ್.ಎನ್. ಚನ್ನಬಸಪ್ಪ, ಎಸ್. ರುದ್ರೇಗೌಡ, ಮಾಜಿ ಶಾಸಕ ಆಯುನೂರು ಮಂಜುನಾಥ್ ಸೇರಿದಂತೆ ಹಲವು ಗಣ್ಯರು, ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.


ಬೇಳೂರು ಹೇಳಿಕೆಗೆ ಖಂಡನೆ
ಹಿರಿಯ ರಾಜಕಾರಣಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಅವರ ಬಗ್ಗೆ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಹಿರಿಯರ ಬಗ್ಗೆ ಆರೀತಿ ಮಾತನಾಡಬಾರದು. ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಮಾತನಾಡಿದ್ದಾರೆ. ಅದಕ್ಕೆ ಮುಖ್ಯಮಂತ್ರಿಗಳೇ ಉತ್ತರ ಕೊಡುತ್ತಾರೆ. ಇವರು ಮಧ್ಯೆ ಮಾತನಾಡಬಾರದು. ಲಿಂಗಾಯಿತರನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಹರತಾಳು ಹಾಲಪ್ಪ ಅವರೇ ಸಾಕ್ಷಿಯಾಗಿದ್ದಾರೆ. ಇದೇ ರೀತಿ ಬೇಳೂರು ಮುಂದುವರಿದರೆ ಅದೇ ಗತಿ ಇವರಿಗೂ ಆಗುತ್ತದೆ ಎಂದು ರುದ್ರಮುನಿ ಸಜ್ಜನ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಪಿ. ಆನಂದಮೂರ್ತಿ, ಸಿ.ಮಹೇಶ್‌ಮೂರ್ತಿ, ಶಿವಯೋಗಿ ಹಂಚಿನಮನೆ, ವಿಜಯಕುಮಾರ್, ಮಲ್ಲಿಕಾರ್ಜುನ ಕಾನೂರು, ಸರಳಾ ಕರಿಬಸಪ್ಪ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!