Shivamogga | ಆರ್‌ಎಂಎಂ ನಿವಾಸದ ಮೇಲೆ E.D. ದಾಳಿ ಖಂಡಿಸಿ ಪ್ರತಿಭಟನೆ

0 157

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿರುವುದನ್ನು ಖಂಡಿಸಿ ಜನಪರ ಹೋರಾಟ ಸಮಿತಿಯ ಪ್ರಮುಖರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.


ಆರ್.ಎಂ. ಮಂಜುನಾಥ ಗೌಡರ ತೀರ್ಥಹಳ್ಳಿಯ ಬೆಟ್ಟಮಕ್ಕಿ ಹಾಗೂ ಕರಕುಚ್ಚಿ ನಿವಾಸ ಹಾಗೂ ಶಿವಮೊಗ್ಗದ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿರುವ ಕ್ರಮ ರಾಜಕೀಯಪ್ರೇರಿತವಾಗಿದೆ. ಗೌಡರು ಕಾಂಗ್ರೆಸ್ ಮುಖಂಡರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ದಾಳಿ ಖಂಡನೀಯ ಎಂದುಪ್ರತಿಭಟನಕಾರರು ತಿಳಿಸಿದರು.


ಮಂಜುನಾಥ ಗೌಡರು ಆರು ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಈ ಹಿಂದೆ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿಯನ್ನಾಗಿಸಲಾಗಿತ್ತು. ಸಿಒಡಿ ತನಿಖೆಯನ್ನು ಕೂಡ ಮಾಡಲಾಗಿತ್ತು. ಆದರೆ ತನಿಖೆಯಲ್ಲಿ ಮಂಜುನಾಥ ಗೌಡರ ಪಾತ್ರ ಇಲ್ಲ ಎಂದು ಸಿಒಡಿ ಅಧಿಕಾರಿಗಳೇ ಕ್ಲೀನ್‌ಚಿಟ್ ನೀಡಿದ್ದಾರೆ. ಅವರು ಮತ್ತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಇವರ ಏಳಿಗೆ ಸಹಿಸದ ಕೆಲವರು ರಾಜಕೀಯ ಪ್ರೇರಿತವಾಗಿ ಈ ದಾಳಿ ನಡೆಸಲು ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.


ಗೌಡರ ವರ್ಚಸ್ಸನ್ನು ಸಹಿಸದ ಬಿಜೆಪಿ ನಾಯಕರ ದುರುದ್ದೇಶವೇ ಇದಕ್ಕೆ ಕಾರಣವಾಗಿದೆ. ಈ ನಾಯಕರು ಕೇಂದ್ರ ಸರ್ಕಾರದ ಸಂಸ್ಥೆಯನ್ನು ಬಳಸಿಕೊಂಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸುವಂತೆ ಮನವಿಯಲ್ಲಿ ಕೋರಲಾಗಿದೆ.


ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ್ ಕಂಕಾರಿ, ಹೆಚ್.ಪಾಲಾಕ್ಷಿ, ಎನ್.ಎಸ್. ಮಹೇಶ್, ಗಾಡಿಕೊಪ್ಪ ರಾಜಣ್ಣ, ಅನಿಲ್‌ಕುಮಾರ್, ಆನಂದ್, ಉಮೇಶ್, ಭಾಸ್ಕರ್, ಶಾಮು ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!