ಕಲ್ಲೂರು ಮೇಘರಾಜ್‌ಗೆ ಸನ್ಮಾನ

0 494

ಶಿವಮೊಗ್ಗ : ಕಲ್ಲೂರು ಮೇಘರಾಜ್ (Kalluru Megharaj) ಅವರು ಹಿರಿಯ ಸಾಮಾಜಿಕ ಹೋರಾಟಗಾರರು, ಶಾಲಾ ಭೂಗೇಣಿ ಸಂತ್ರಸ್ತರ ಪರವಾಗಿ ಹೋರಾಟ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಆಗ್ರಹಿಸಿ 1979ರಲ್ಲಿ ಲೋಕಸೇವಾ ಆಯೋಗದ ಕಚೇರಿ ಎದುರು ಹೋರಾಟ ಮಾಡಿದವರಲ್ಲಿ ಮೊದಲಿಗರು ಎಂದು ಖ್ಯಾತ ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ (Arasalu Ranganath) ಹೇಳಿದರು.

ಅವರು ಇಂದು ನಗರದ ಗಾಂಧಿ ಪಾರ್ಕ್‌ನಲ್ಲಿ ಕಲ್ಲೂರು ಮೇಘರಾಜ್ ಅಭಿಮಾನಿ‌ ಬಳಗದಿಂದ ಹಮ್ಮಿಕೊಂಡಿದ್ದ ಕೆಂಗಲ್ ಹನುಮಂತಯ್ಯ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಕಲ್ಲೂರು ಮೇಘರಾಜ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ‌ ಶಾಲು ಹೊದಿಸಿ ಸಿಹಿ ಹಂಚಿ ಸನ್ಮಾನಿಸಿ ಬಳಿಕ ಮಾತನಾಡಿದರು.


ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳಾಗಿವೆ. 1956ರಲ್ಲಿ ಕರ್ನಾಟಕ ರಾಜ್ಯ ಉದಯವಾಯಿತು. ಆದರೆ ಅಂದು ಲೋಕಸೇವಾ ಆಯೋಗದ ಪರೀಕ್ಷೆಯನ್ನು ಬೇರೆ ಭಾಷೆಯಲ್ಲಿ ಬರೆಯಬೇಕಿತ್ತು. ಆ ಸಂದರ್ಭದಲ್ಲಿ ದಿಗ್ಗಜ ಸಾಹಿತಿಗಳಾದ ದೇ. ಜವರೇಗೌಡ, ಸಿದ್ದಯ್ಯ ಪುರಾಣಿಕ್, ಪ್ರೊ. ಜಿ. ರಾಮಕೃಷ್ಣ, ಡಾ. ಚಿದಾನಂದಮೂರ್ತಿ ಮುಂತಾದವರೊಂದಿಗೆ ಕನ್ನಡ ಸಂಘರ್ಷ ಸಮಿತಿಯ ಅಂದಿನ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕಲ್ಲೂರು ಮೇಘರಾಜ್ ಅವರು ಉಪವಾಸ ಸತ್ಯಾಗ್ರಹ ಮಾಡಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಆಗ್ರಹಿಸಿದ್ದರು. ಪರಿಣಾಮ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ತಕ್ಷಣ ರಾಜ್ಯದಲ್ಲಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟು ಸರ್ಕಾರಿ ಆದೇಶದ ಪ್ರತಿಯನ್ನು ಮುಖ್ಯ ಕಾರ್ಯದರ್ಶಿಗಳ ಮೂಲಕ ಉಪವಾಸ ನಿರತ ಸ್ಥಳಕ್ಕೆ ತಲುಪಿಸಿದ್ದರು. ಇಂದಿಗೆ ಈ ಸತ್ಯಾಗ್ರಹದ 44ನೇ ವರ್ಷದ ನೆನಪಿನ ಹಾಗೂ ಸಾಧನೆಯ ಕಾರ್ಯಕ್ರಮವನ್ನು ಗಾಂಧಿ ಪ್ರತಿಮೆ ಎದುರು ಸಾಂಕೇತಿಕವಾಗಿ ನಡೆಸಿ ಕಲ್ಲೂರು ಮೇಘರಾಜ್‌ರವರಿಗೆ ಸನ್ಮಾನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಕೆ.ಟಿ ಗಂಗಾಧರ್, ಎಂ.ಎನ್. ಸುಂದರರಾಜ್, ಟಿ.ಆರ್ ಕೃಷ್ಣಪ್ಪ, ಶೇಖರ ಗೌಳೇರ್, ಶಂಕ್ರಾನಾಯ್ಕ, ರಾಮಚಂದ್ರ, ಪಡವಳ್ಳಿ ಹರ್ಷೇಂದ್ರಕುಮಾರ್, ಮಂಜುನಾಥ ಪಾಟೀಲ್, ಈರಪ್ಪ, ಸುವರ್ಣಾ ನಾಗರಾಜ್, ಜಿ.ವಿ.ಮಂಜುಳಾ, ಪುರದಾಳ್ ನಾಗರಾಜ್, ನರಸಿಂಹ ಮೂರ್ತಿ, ಆದಿಶೇಷ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!