ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಎಸ್‌ಎಸ್ ಪ್ರತಿಭಟನೆ ; ಶೀಘ್ರ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ

0 477

ಹೊಸನಗರ: ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ತಲೆದೋರಿರುವ ತಾಲೂಕಿನ ಹಲವು ಜ್ವಲಂತ ಸಮಸ್ಯೆಗಳಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ತಾಲೂಕಿನ ಸಮಗ್ರ ಅಭಿವೃದ್ದಿ ಸಹಕರಿಸಬೇಕೆಂದು ಆಗ್ರಹಿಸಿ ತಾಲೂಕು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ರಿ) (DSS) ಗುರುವಾರ ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಜಿಲ್ಲಾ ಸಂಚಾಲಕ ಕೆ.ವಿ. ನಾಗರಾಜ್ ಅರಳಸುರಳಿ ಮಾತನಾಡಿ, ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ಮಹಿಳಾ ವೈದ್ಯರ ಕೊರತೆಯಿದೆ. ಬಡವರ ಅನುಕೂಲಕ್ಕಾಗಿ ಸೂಕ್ತ ಎಕ್ಸ್ರೇ ಹಾಗೂ ಸ್ಕ್ಯಾನಿಂಗ್ ಯಂತ್ರ ಅಳವಡಿಸಬೇಕಿದೆ. ರಕ್ತನಿಧಿಯ ತುರ್ತು ಅವಶ್ಯಕತೆ ಇದೆ. ಜನಔಷಧಿ ಕೇಂದ್ರಕ್ಕೆ ಮರುಚಾಲನೆ ನೀಡಬೇಕು. ತಾಲೂಕಿನ ಜೆಜೆಎಂ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಕಳೆದ ಗುಣಮಟ್ಟ ಹೊಂದಿದ್ದು, ಈ ಕುರಿತು ಸೂಕ್ತ ತನಿಖೆ ಆಗಬೇಕು. ತೋಟಗಾರಿಕೆ ಇಲಾಖೆಯಿಂದ ಹಿಂದಿನ ಗಂಗನಕೊಪ್ಪದ ವರೆಗೆ ಎಸ್‌ಸಿ/ಎಸ್‌ಟಿ ಅನುದಾನದ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಖಾಸಗಿ ಕಟ್ಟಡದಲ್ಲಿರುವ ಉಪನೊಂದಣಾಧಿಕಾರಿ, ಅಬಕಾರಿ ಹಾಗೂ ಸಿಡಿಪಿಓ ಕಚೇರಿಗಳನ್ನು ಸರ್ಕಾರಿ ಕಟ್ಟಡಗಳಿಗೆ ವರ್ಗಯಿಸಬೇಕು. ಎಪಿಎಂಸಿ ಹಿಂಭಾಗದ ಕೈಗಾರಿಕಾ ನಿಗಮಕ್ಕೆ ಸೇರಿದ ಜಾಗವನ್ನು ಎಸ್‌ಸಿ/ಎಸ್‌ಸಿ ಜನಾಂಗಕ್ಕೆ ಹಾಗೂ ಮೂಲ ಗುಡಿಗಾರಿಕೆ, ಕುಶಲಕರ್ಮಿಗಳಿಗೆ ನೀಡದೆ ಅವೈಜ್ಞಾನಿಕವಾಗಿ ಹಂಚಿಕೆ ಮಾಡಲಾಗಿದ್ದು, ತತಕ್ಷಣ ಅಕ್ರಮ ನಿವೇಶನ ಮಂಜೂರಾತಿ ವಜಾಗೊಳಿಸಿ ಮರು ಹಂಚಿಕೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ತಾಲೂಕು ಸಂಚಾಲಕ ಜಯನಗರ ಗುರುಪ್ರಸಾದ್ ಮಾತನಾಡಿ, ಕೈಗಾರಿಕಾ ಚುಟುವಟಿಕೆಗಳಿಗೆ ಮೀಸಲಿಟ್ಟಿರುವ ಈ ಪ್ರದೇಶದಲ್ಲಿ ಖಾಸಗಿ ಕಂಪನಿಗೆ ಸೇರಿದ ಒಂದು ‘ಟೆಲಿಪೋನ್’ ಟವರ್ ತಲೆ ಎತ್ತಿದೆ. ಈ ಸಂಗತಿಯನ್ನು ಜಿಲ್ಲಾಡಳಿತ ಸೂಕ್ತವಾಗಿ ಪರಿಗಣಿಸಬೇಕು ಹಾಗೂ ಸಂಬಂಧಪಟ್ಟವರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಕೋರಿದರು.

ತಾಲೂಕಿನ ವಸವೆ ಗ್ರಾಮದ ಸ.ನಂ. 86ರ 1.38 ಎಕರೆ ದಲಿತ ಮಹಿಳೆಯ ಜಮೀನನ್ನು ಪಟ್ಟಣದ ಪ್ರತಿಷ್ಠಿತ ಕುಟುಂಬವೊಂದು ಅಕ್ರಮ ದಾಖಲೆ ಸೃಷ್ಟಿಸಿ ದಲಿತ ಮಹಿಳೆಗೆ ಅನ್ಯಾಯ ಎಸಗಲು ಮುಂದಾಗಿದೆ. ಕೂಡಲೇ ಸ್ಥಳ ಪರಿಶೀಲಿಸಿ ನೊಂದ ದಲಿತ ಮಹಿಳೆಗೆ ಸೂಕ್ತ ನ್ಯಾಯ ಕೊಡಿಸಬೇಕು. ಪಟ್ಟಣದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ, ಅಂಬೇಡ್ಕರ್ ವೃತ್ತದಲ್ಲಿ ಅವರ ಪುತ್ತಳಿ ನಿರ್ಮಾಣ, ಪಟ್ಟಣ ಪಂಚಾಯತಿಯ ಗುತ್ತಿಗೆ ನೌಕರರನ್ನು ಖಾಯಂಗೊಳಿಸುದು, ಕಳೆದ ಹಲವು ವರ್ಷಗಳಿಂದ ಜಾಲಿ ಇರುವ ಬಸ್ ನಿಲ್ದಾಣದ ಪಂಚಾಯತಿ ಸಂಕೀರ್ಣಕ್ಕೆ ಮರು ಟೆಂಡರ್ ಆಹ್ವಾನಕ್ಕೆ ಸೂಕ್ತಕ್ರಮ ವಹಿಸುವಂತೆ ಸರ್ಕಾರವನ್ನು ಒತ್ತಾಯಿಸಿ ತಹಶೀಲ್ದಾರ್ ರಶ್ಮಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಧರಣಿಯಲ್ಲಿ ತಾಲೂಕು ಸಂಚಾಲಕ ಬಿ.ಎಂ. ಪ್ರಕಾಶ್, ಸಂಘಟನಾ ಸಂಚಾಲಕ ಎ. ಹರೀಶ್, ಗಂಗನಕೊಪ್ಪ ಅಣ್ಣಪ್ಪ, ಮಂಜುನಾಥ, ಸುಬ್ರಹ್ಮಣ್ಯ, ನಾರಾಯಣ, ರಾಮ-ಲಕ್ಷ್ಮಣ, ಯೋಗಾನಂದ್, ಗಂಗನಕೊಪ್ಪ ಚಿಕ್ಕ, ಕಿರಣ್, ಶ್ರೀ ಕುಮಾರ್, ನಾಗರಾಜ, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!