ಕಾಲೇಜು ಅಭಿವೃದ್ಧಿಗೆ ಬದ್ಧ ; ಕೊಡಚಾದ್ರಿ ಕಾಲೇಜು ಸಿಡಿಸಿ ಸಭೆಯಲ್ಲಿ ಶಾಸಕ ಬೇಳೂರು ಹೇಳಿಕೆ

0 1,206

ಹೊಸನಗರ: 4.50 ಕೋಟಿ ರೂ. ವೆಚ್ಚದಲ್ಲಿ ಹೊಸನಗರದ (Hosanagara) ಕೊಡಚಾದ್ರಿ (Kodachadri College) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಗತ್ಯವಿರುವ ಕಂಪ್ಯೂಟರ್ ಲ್ಯಾಬ್, ಆಡಿಟೋರಿಯಂ, ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ (Beluru Gopalakrishna) ಹೇಳಿದರು.

ಅವರು ಕಾಲೇಜಿನಲ್ಲಿ ಸೋಮವಾರ ನಡೆದ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರವು ಶೈಕ್ಷಣಿಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬದ್ಧತೆ ಹೊಂದಿದೆ. ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಸರಕಾರ ಆಧ್ಯತೆಯ ಮೇರೆಗೆ ಅನುದಾನ ಬಿಡುಗಡೆ ಮಾಡಲಿದೆ. ಆದರೆ ಎಲ್ಲವನ್ನೂ ಏಕಕಾಲದಲ್ಲಿ ಮಾಡಲು ಸಾಧ್ಯವಿಲ್ಲ. ದಾನಿಗಳು, ಶಿಕ್ಷಣಾಸಕ್ತರ ಸಹಕಾರ ಪಡೆಯಿರಿ ಎಂದು ಸಲಹೆ ನೀಡಿದರು.

ಕಾಲೇಜಿನಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಶೌಚಾಲಯ, ಗ್ರಂಥಾಲಯ ನಿರ್ವಹಣೆಗೆ ಮೊದಲ ಮಹತ್ವ ನೀಡಿ. ಉಪನ್ಯಾಸಕರು ವಿದ್ಯಾರ್ಥಿಗಳ ಕುರಿತು ಕಾಳಜಿ ಹೊಂದಿ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಉಪನ್ಯಾಸಕರ ವರ್ಗಕ್ಕೆ ಸೂಚಿಸಿದರು.

ಕಾಲೇಜಿಗೆ ಬಿಎಸ್ಸಿ ಹಾಗೂ ಎಂ.ಕಾಂ. ಕೋರ್ಸ್‌ಗಳ ಅಗತ್ಯವಿದೆ. ಇಲ್ಲಿನ ವಿದ್ಯಾರ್ಥಿಗಳು ದೂರದ ಊರುಗಳಿಗೆ ಹೋಗಾಬೇಕಾಗಿದೆ. ಕಾಲೇಜಿನ ಮಕ್ಕಳಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಹಾಗೂ ಬೈಕ್ ಸ್ಟಾಂಡ್‌ ಅಗತ್ಯವಿದೆ. ಬ್ಯಾಕೋಡು, ತುಮರಿ, ನಿಟ್ಟೂರಿನಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಅವರಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯಿಲ್ಲ ಎಂದು ಉಪನ್ಯಾಸಕ ವರ್ಗ ಶಾಸಕರಿಗೆ ಮನವಿ ಮಾಡಿದ್ದು ಒಂದೆರಡು ತಿಂಗಳಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಪ್ರಾಂಶುಪಾಲ ಡಾ.ಉಮೇಶ್, ಸಮಿತಿಯ ಲೆಕ್ಕಪತ್ರಗಳನ್ನು ಸಭೆಗೆ ಮಂಡಿಸಿದರು.
ಸಭೆಯಲ್ಲಿ ಹಿರಿಯರಾದ ಶ್ರೀನಿವಾಸ ಕಾಮತ್, ಅಂಜನ್ ಟೆಕ್ಸ್ ಟೈಲ್ಸ್ ರಾಜಮೂರ್ತಿ, ನಿವೃತ್ತ ಶಿಕ್ಷಕರಾದ ರಾಜಶೇಖರಗೌಡ, ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರ, ಹಿಟಾಚಿ ಶ್ರೀಧರ, ಸುಬ್ರಹ್ಮಣ್ಯ, ಬೃಂದಾವನ ಪ್ರವೀಣ್, ಸುದೀಪ, ಅಣ್ಣಪ್ಪ, ಲೋಕೇಶ್ವರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಕವಿತಾ, ಕೋಮಲ, ಗ್ರಂಥಪಾಲಕ ಲೋಕೇಶ್ ಮತ್ತಿತರರು ಇದ್ದರು.

ಅತಿಥಿ ಉಪನ್ಯಾಸಕರ ಮನವಿ:
ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯೊಂದಿಗೆ ಖಾಯಂಗೊಳಿಸುವ ಆಶ್ವಾಸನೆಯನ್ನು ಸರ್ಕಾರ ನೀಡಿದ್ದು, ಇದಕ್ಕೆ ಸಂಬಂಧಪಟ್ಟಂತೆ 2023-24ರ ಯುಜಿಸಿ ನಿಯಮಾವಳಿ ಅನುಸಾರ ಅರ್ಹತೆ ಮತ್ತು ಸೇವಾ ಹಿರಿತನದ ಆಧಾರದ ಮೇಲೆ ಅತಿಥಿ ಉಪನ್ಯಾಸಕರುಗಳ ವಯೋಮಿತಿ ಮೀರುತ್ತಿದೆ. ಭರವಸೆ ಈಡೇರದ ಈ ಕಾರಣಕ್ಕೆ ರಾಜ್ಯಾದ್ಯಂತ ಉಪನ್ಯಾಸಕರು ಅನಿರ್ದಿಷ್ಠ ಅವಧಿ ಹೋರಾಟಕ್ಕೆ ಕರೆ ನೀಡಿದ್ದು, ಈ ಹೋರಾಟಕ್ಕೆ ನಮ್ಮೊಂದಿಗೆ ಧ್ವನಿಯಾಗಿ ಸರ್ಕಾರದ ಗಮನ ಸೆಳೆದು ಬೆಂಬಲ ಸೂಚಿಸಬೇಕು ಎಂದು ಕಾಲೇಜಿನ ಅತಿಥಿ ಉಪನ್ಯಾಸಕರು ಶಾಸಕ ಗೋಪಾಲಕೃಷ್ಣ ಅವರಿಗೆ ಈ ವೇಳೆ ಮನವಿ ಸಲ್ಲಿಸಿದರು.

Leave A Reply

Your email address will not be published.

error: Content is protected !!