ಚಂದ್ರಗುತ್ತಿ ; ವಿಜೃಂಭಣೆಯಿಂದ ಜರುಗಿದ ಶ್ರೀ ರೇಣುಕಾಂಬ ದೇವಿ ಮಹಾ ರಥೋತ್ಸವ

0 251

ಸೊರಬ : ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಹಾಗೂ ಪುರಾಣ ಪ್ರಸಿದ್ಧ ಕ್ಷೇತ್ರ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಮಹಾರಥೋತ್ಸವ ಉದೋ ಉದೋ ಎಂಬ ಘೋಷದೊಂದಿಗೆ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.

ಬೆಟ್ಟದ ಮೇಲಿರುವ ದೇವಾಲಯದಲ್ಲಿ ಶ್ರೀ ರೇಣುಕಾಂಬ ದೇವಿಯ ಉತ್ಸವ ಮೂರ್ತಿಯನ್ನು ತಂದು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥೋತ್ಸವಕ್ಕೆ ಸಾಗರ ಉಪ ವಿಭಾಗಾಧಿಕಾರಿ ಆರ್. ಯತೀಶ್ ಚಾಲನೆ ನೀಡಿದರು. ಭಕ್ತರು ಶ್ರೀದೇವಿಯ ನಾಮ ಸ್ಮರಣೆಯೊಂದಿಗೆ ರಥ ಎಳೆದರು. ರಥಕ್ಕೆ ಅಕ್ಕಿ, ಕಾಳುಮೆಣಸು, ಉತ್ತುತ್ತೆ, ಬಾಳೆಹಣ್ಣು ಬೀರುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಪ್ರಾರ್ಥಿಸಿದರು.

ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು‌. ರೇಣುಕಾಂಬೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಹರಕೆ ಹೊತ್ತವರು ದೀಡ್ ನಮಸ್ಕಾರ ಸಲ್ಲಿಸುವುದು, ಪಡ್ಲಿಗೆ ತುಂಬಿಸುವುದು, ಚೌಲ, ಮಕ್ಕಳಿಗೆ ಕಿವಿ ಚುಚ್ಚಿಸುವುದು ಮುಂತಾದ ಕಾರ್ಯಕ್ರಮ ಮಾಡುವ ಮೂಲಕ ದೇವಿ ಕೃಪೆಗೆ ಪಾತ್ರರಾದರು.

ರಥೋತ್ಸವದ ತಾಂತ್ರಿಕ ವಿಧಿವಿಧಾನಗಳನ್ನು ಕಳೆದಿ ರಾಮ್ ಭಟ್ ವಹಿಸಿದ್ದರು, ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಇಲ್ಲಿನ ಪ್ರಧಾನ ಅರ್ಚಕರಾದ ಅರವಿಂದ ಭಟ್ ಅವರ ನೇತೃತ್ವದಲ್ಲಿ ಜರುಗಿತು.

ರೈತರು ತಾವು ಬೆಳೆದ ಅಡಿಕೆ, ಬಾಳೆ ಫಸಲನ್ನು ರಥಕ್ಕೆ ಸಮರ್ಪಿಸಿದರು, ಇನ್ನು ಭಕ್ತರು ಹೂವಿನ ಹಾರಗಳನ್ನು ಮೆರವಣಿಗೆ ಮೂಲಕ ತಂದು ರಥಕ್ಕೆ ಅರ್ಪಿಸುವುದು ವಿಶೇಷವಾಗಿತ್ತು.

ಶ್ರೀ ರೇಣುಕಾಂಬ ದೇವಿ ಮಹಾ ರಥೋತ್ಸವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಂದ್ರಗುತ್ತಿ ಗ್ರಾಮಕ್ಕೆ ಆಗಮಿಸಿದ್ದರು. ಹಾವೇರಿ, ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ ಶಿವಮೊಗ್ಗ, ಬ್ಯಾಡಗಿ, ರಾಣೆಬೆನ್ನೂರು, ರಾಯಚೂರು, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕ ಮತ್ತು ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ತಾಲೂಕಿನ ವಿವಿಧ ಸಂಘ ಸಂಸ್ಥೆಯವರು ಬಂದಂತಹ ಭಕ್ತರಿಗೆ ಕುಡಿಯಲು ನೀರು-ಬೆಲ್ಲ ಸೇವೆ ನೀಡಿದರು.

ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರಿಗೆ ಜಾತ್ರೆಯ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ರಕ್ಷಣಾ ಸಿಬ್ಬಂದಿ ಸೇವೆ ಮತ್ತು ಆರೋಗ್ಯ ಕೇಂದ್ರಗಳು, ಹಾಗೂ ಸಹಾಯ ಕೇಂದ್ರಗಳನ್ನು ಸಹ ತೆರೆಯಲಾಗಿತ್ತು.

ತಹಶೀಲ್ದಾರ್ ಹುಸೇನ್ ಸರಕಾವಸ್, ಸಹಾಯಕ ಚುನಾವಣಾಧಿಕಾರಿ ಬಿ. ರಾಜೇಶ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ಸೇರಿದಂತೆ ತಾಲೂಕಿನ ಕಂದಾಯ ಇಲಾಖೆ, ರಕ್ಷಣಾ ಇಲಾಖೆ ಅಧಿಕಾರಿಗಳು, ಗ್ರಾಮದ ಸೇರಿದಂತೆ ತಾಲೂಕಿನ ಅನೇಕ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ನೆರಳಿನ ವ್ಯವಸ್ಥೆಗಾಗಿ ಶಾಮಿಯಾನ ವ್ಯವಸ್ಥೆ, ಕುಡಿಯಲು ನೀರು, ಮೊಬೈಲ್ ಶೌಚಗೃಹ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ತಾಲೂಕು ಆಡಳಿತ ಮತ್ತು ದೇವಸ್ಥಾನದ ಆಡಳಿತ ಮಂಡಳಿಯಿಂದ ಮೂಲ ಸೌಲಭ್ಯ ಕಲ್ಪಿಸಿರುವುದಕ್ಕೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.

Leave A Reply

Your email address will not be published.

error: Content is protected !!