Shivamogga | ಜಿಲ್ಲೆಯಲ್ಲಿ ಹಲವು ವಸತಿ ಯೋಜನೆ ಕಾಮಗಾರಿ ಸ್ಥಗಿತ ; ಬಿಜೆಪಿ ಆಕ್ರೋಶ

0 68

ಶಿವಮೊಗ್ಗ: ಜಿಲ್ಲೆಯಲ್ಲಿ ಹಲವು ವಸತಿ ಯೋಜನೆಗಳ ಅಡಿಯಲ್ಲಿ ಮನೆಗಳ ನಿರ್ಮಾಣವಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಬಡವರು ಸೂರಿಗಾಗಿ ಕಾಯುತ್ತಲೇ ಇದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ, ಬಸವ, ಪ್ರಧಾನಮಂತ್ರಿ ಆವಾಸ್, ದೇವರಾಜ ಅರಸು, ಬಿ.ಆರ್. ಅಂಬೇಡ್ಕರ್, ವಾಜಪೇಯಿ, ಕೊಳಚೆ ಪ್ರದೇಶ ಮುಂತಾದ ವಸತಿ ಯೋಜನೆಗಳ ಅಡಿ ಜಿಲ್ಲೆಯಲ್ಲಿ ಸುಮಾರು 15ಸಾವಿರಕ್ಕೂ ಹೆಚ್ಚು ಜನರು ಫಲಾನುಭವಿಗಳು ಸೂರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಈ ಎಲ್ಲಾ ಕಾಮಗಾರಿಗಳು ಮುಗಿಯುವ ಹಂತಕ್ಕೆ ಬಂದಿತ್ತು. ಚುನಾವಣೆ ಬಂದಿದ್ದರಿಂದ ಅಲ್ಲಿಗೆ ನಿಂತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಎಲ್ಲಾ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕು ಎಂದು ಇಲ್ಲದಿದ್ದಲ್ಲಿ ಬಡವರ ಪರ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.


ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಸೂರಿಗಾಗಿನಮ್ಮ ಅನೇಕ ಹೆಣ್ಣು ಮಕ್ಕಳು ತಾಳಿ ಮಾರಿ ಹಣ ಕಟ್ಟಿದ್ದಾರೆ. ಬಿಜೆಪಿ ಬಡವರ ಪರವಾಗಿ ನಿಲ್ಲುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಯೋಜನೆಗಳ ಕಾಮಗಾರಿಗಳು ಹೇಗಿವೆ, ಎಲ್ಲಿಗೆ ನಿಂತಿವೆ, ಬಡವರ ಪರಿಸ್ಥಿತಿ ಏನು ಎಂಬುದನ್ನು ವಸತಿ ಸಚಿವ ಜಮೀರ್ ಅಹ್ಮದ್ ಶಿವಮೊಗ್ಗಕ್ಕೆ ಬಂದು ಖುದ್ದಾಗಿ ಪರಿಶೀಲನೆ ನಡೆಸಲಿ. ಪರಿಸ್ಥಿತಿಯನ್ನು ಅವಲೋಕಿಸಲಿ ಆಗಲಾದರೂ ಅವರಿಗೆ ಬಡವರ ಮೇಲೆ ಕರುಣೆ ಬರಬಹುದು ಎಂದರು.


ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಬಾಲು, ಶಶಿಧರ್, ಅಣ್ಣಪ್ಪ ಕೆ.ವಿ. ಇದ್ದರು.

Leave A Reply

Your email address will not be published.

error: Content is protected !!