ಜೀವನ ವಿಕಸನಕ್ಕೆ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕ ; ರಂಭಾಪುರಿ ಶ್ರೀಗಳು

0 376

ರಿಪ್ಪನ್‌ಪೇಟೆ : ಮಾನವ ಜನ್ಮ ಅತ್ಯಂತ ಪವಿತ್ರವಾದುದು. ಅರಿವು ಸಂಸ್ಕಾರಗಳ ಮೂಲಕ ಮನುಷ್ಯನ ಬದುಕು ಉಜ್ವಲಗೊಳ್ಳಬೇಕಾಗಿದೆ. ಗುರು ಮತ್ತು ಗುರಿಯನ್ನು ಹೊಂದಿ ನಡೆದಿದ್ದಾದರೆ ಜೀವನ ಸಾರ್ಥಕಗೊಳ್ಳುತ್ತದೆ. ಜೀವನ ವಿಕಸನಕ್ಕೆ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (Rambhapuri) ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ತೀರ್ಥಹಳ್ಳಿ (Thirthahalli) ಕೊಣಂದೂರಿನಲ್ಲಿ (Konandur) ಶ್ರೀ ವೀರಭದ್ರೇಶ್ವರ ಇಂಡಸ್ಟ್ರೀಜ್ ನೂತನ ಕಟ್ಟಡ ಉದ್ಘಾಟಿಸಿ, ಇಷ್ಟಲಿಂಗ ಮಹಾಪೂಜಾ ನಡೆಸಿ ನಂತರ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವನ ಉತ್ಕರ್ಷತೆಗೆ ಆದರ್ಶ ಮೌಲ್ಯಗಳು ಉತ್ಥಾನಗೊಳ್ಳಬೇಕಾಗಿದೆ. ಮಾತು ಮನ ಕೃತಿ ಒಂದಾಗಿ ಶ್ರಮಿಸಿದರೆ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ವೀರಶೈವ ಧರ್ಮ ಸಿದ್ಧಾಂತದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದ್ದಾರೆ. ಪರಶಿವನ ಸಾಕಾರ ರೂಪವೇ ಶ್ರೀ ಗುರುವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಜೀವನದಲ್ಲಿ ಗುರಿ ಮತ್ತು ಧ್ಯೇಯ ಇಲ್ಲದ ಕಾರಣ ಮನುಷ್ಯ ದಿಕ್ಕು ದಾರಿ ತಪ್ಪಿ ನಡೆದು ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ. ಆಹಾರ ನೀರು ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತದೆ. ಕಲಿಗೆ ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಿದರೆ ಬದುಕಿಗೆ ಬೆಲೆ ಬರುವುದರಲ್ಲಿ ಯಾವ ಸಂದೇಹವಿಲ್ಲ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬೆಸೆಯುವ ಕೆಲಸ ಮಾಡಬೇಕಾಗಿದೆ. ಕೆ.ಆರ್.ಪ್ರಕಾಶ ಸಹೋದರರು ಯಾವುದೇ ವಿಶೇಷ ಕಾರ್ಯಗಳಿರಲಿ ಕಟ್ಟಡಗಳ ಉದ್ಘಾಟನೆಗಳ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜಾ ನೆರವೇರಿಸಿಕೊಂಡು ಬರುತ್ತಿರುವುದು ಧರ್ಮ ಪೀಠದ ಬಗ್ಗೆ ಅವರಲ್ಲಿರುವ ಶ್ರದ್ಧೆಯನ್ನು ತೋರಿಸುತ್ತದೆ ಎಂದರು.

ಕವಲೇದುರ್ಗದ ಭುವನಗಿರಿ ಮಠದ ಮರುಳಸಿದ್ಧ ಶಿವಾಚಾರ್ಯರು ವಾಸ್ತು ಶಾಂತಿ, ಹೋಮ ಹವನಗಳನ್ನು ನೆರವೇರಿಸಿದರು. ಮಳಲಿ ಮಠದ, ತೊಗರ್ಸಿ ಮಳೇಮಠದ, ಕೊಣಂದೂರು ಬೃಹನ್ಮಠದ, ಕಡೆನಂದಿಹಳ್ಳಿ ಶ್ರೀ ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.

ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದರು. ಮಾತೋಶ್ರೀ ಪಾರ್ವತೆಮ್ಮ ರೇವಣ್ಣನವರ ಎಲ್ಲ ಮಕ್ಕಳು ಅವರ ಆಪ್ತ ಬಂಧು ಮಿತ್ರರು ಸಮಾರಂಭದಲ್ಲಿ ಉಪಸ್ಥಿತರಿದ್ದು ಶ್ರೀ ರಂಭಾಪುರಿ ಜದ್ಗುರುಗಳಿಂದ ಆಶೀರ್ವಾದ ಪಡೆದರು. ಕೆ.ಆರ್.ಪ್ರಕಾಶ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave A Reply

Your email address will not be published.

error: Content is protected !!