ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ಹಗುರವಾಗಿ ಮಾತನಾಡುವುದು ತರವಲ್ಲ

0 38

ಶಿವಮೊಗ್ಗ: ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುರಿತಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ .ಕೆ. ಹರಿಪ್ರಸಾದ್ ಬಹಿರಂಗವಾಗಿ ಹಗುರವಾಗಿ ಮಾತನಾಡುವುದು ತರವಲ್ಲ ಎಂದು ಕರ್ನಾಟಕ ರಾಜ್ಯ ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ. ಶೇಷಾದ್ರಿ ಹೇಳಿದ್ದಾರೆ.


ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲದೆ ಇರಬಹುದು. ಆದರೆ ಇದನ್ನೇ ಇಟ್ಟುಕೊಂಡು ಅವರು ಕಾಂಗ್ರೆಸ್ ಸರ್ಕಾರದ ಅದರಲ್ಲೂ ಮುಖ್ಯಮಂತ್ರಿಗಳ ವಿರುದ್ದವಾಗಿ ಮಾತನಾಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಅವರು ಶೋಷಿತ ವರ್ಗದ ಧ್ವನಿಯಾಗಿದ್ದಾರೆ. ಅಹಿಂದ ಸಮಾವೇಶದ ಮೂಲಕ ನಾಡಿನ ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಸಣ್ಣ ಸಣ್ಣ ಜಾತಿಗಳಿಗೆ ಅವರಿಂದ ನ್ಯಾಯ ಸಿಕ್ಕಿಲ್ಲ ಎಂದು ಹರಿಪ್ರಸಾದ್ ಹೇಳುವಲ್ಲಿ ಯಾವ ಅರ್ಥವೂ ಇಲ್ಲ ಎಂದಿದ್ದಾರೆ.


ರಾಜ್ಯ ಸರ್ಕಾರ ಈಗಿನ್ನೂ ಟೇಕಾಫ್ ಆಗುತ್ತಿದೆ.  ತನ್ನ ಗ್ಯಾರಂಟಿಗಳ ಮೂಲಕ ಬಡವರ, ಹಿಂದುಳಿದವರ ಕಲ್ಯಾಣಕ್ಕಾಗಿ ಅತ್ಯಂತ ಶ್ರಮದಿಂದ ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಪಕ್ಷದಲ್ಲಿದ್ದುಕೊಂಡು ಟೀಕಿಸುವುದು ವಿರೋಧ ಪಕ್ಷಗಳಿಗೆ ಆಹಾರವಾದಂತಾಗುತ್ತದೆ. ಏನೇ ಅಸಮಾಧಾನಗಳಿದ್ದರೂ ಅದಕ್ಕೆ ಪಕ್ಷದ ಚೌಕಟ್ಟಿದೆ. ಅದರೊಳಗೇ ಮಾತನಾಡಬೇಕಾಗುತ್ತದೆ. ಸ್ವಾಮೀಜಿಗಳ ಸಮ್ಮುಖದಲ್ಲಿ ಸಭೆ ಮಾಡುವುದು, ಟೀಕಿಸುವುದು ತರವಲ್ಲ. ಅದರ ಬದಲು ಹೈಕಮಾಂಡಿಗೆ ತಿಳಿಸಬಹುದು ಎಂದರು.


ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರೂ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ. ಆ ಜಾತಿಗಳಿಗೆ ಅವಕಾಶ ಕೊಡಲಾಗಿದೆ. ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡಿದ್ದಾರೆ. ಹೀಗಿದ್ದೂ ದಲಿತರಿಗೆ ಏನೂ ಮಾಡಿಲ್ಲ. ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿಲ್ಲ ಎಂದು ಹೇಳುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಅಥವಾ ಪಕ್ಷದೊಳಗೆ ಮತ್ಯಾರನ್ನೋ ಓಲೈಸುವ ಕೆಲಸ ಹರಿಪ್ರಸಾದ್ ಅಂತವರಿಗೆ ನ್ಯಾಯವಾದುದಲ್ಲ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!