ರಾಜ್ಯದ ಪ್ರಮುಖ ಪ್ರವಾಸಿ ತಾಣ ಸಕ್ರೆಬೈಲಿನಲ್ಲಿ ಮೂರು ಆನೆಗಳಿಗೆ ನಾಮಕರಣ

0 101

ಶಿವಮೊಗ್ಗ : ಸಕ್ರೆಬೈಲಿನಲ್ಲಿ ಆರು ತಿಂಗಳ ಹಿಂದೆ ಜನಿಸಿದ್ದ ತುಂಟ ಮರಿ ಆನೆಗೆ ನಾಮಕರಣವಾಗಿದೆ. ಈ ಮರಿ ಪ್ರವಾಸಿಗರನ್ನ ಸಮರೋಪಾದಿಯಲ್ಲಿ ಬಿಡಾರಕ್ಕೆ ಆಕರ್ಷಿಸುತ್ತಿತ್ತು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಈ ಮರಿಗೆ ಹೆಸರಿಡಲಾಗಿದೆ. ಇದರ ಜೊತೆ ಇನ್ನೂ ಎರಡು ಆನೆಗಳೂ ಹೆಸರು ಪಡೆದುಕೊಂಡಿವೆ.

ಶಿವಮೊಗ್ಗದಿಂದ ಹನ್ನೆರಡು ಕಿಲೋಮೀಟರ್ ದೂರವಿರುವ ಸಕ್ರೆಬೈಲು ಆನೆಬಿಡಾರದಲ್ಲಿ ವಿಶ್ವ ಪರಿಸರ ದಿನಾಚಾರಣೆ ಆಚರಿಸಲಾಯ್ತು. ಈ ಸಂದರ್ಭದಲ್ಲಿ ಮೂರು ಆನೆಗಳಿಗೆ ಅರಣ್ಯ ಇಲಾಖೆ ಹೆಸರಿಟ್ಟಿದೆ. ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ಚಿಕ್ಕಮಗಳೂರಿನ ಕೊಪ್ಪದಲ್ಲಿ ಸೆರೆ ಹಿಡಿದ ಆನೆಗೆ ಕೃಷ್ಣ ಎಂದು, ಬಿಡಾರದ ಕುಂತಿ ಆನೆಯ ಮರಿಗೆ ದ್ರುವ ಎಂದು, ಸ್ಕ್ರಾಲ್ ನಲ್ಲಿ ತರಬೇತಿ ಪಡೆಯುತ್ತಿರುವ ಆನೆಗೆ ಅಭಿಮನ್ಯು ಎಂದು ನಾಮಕರಣ ಮಾಡಲಾಗಿದೆ. ಈ ಅಭಿಮನ್ಯು ಆನೆ ಚನ್ನಗಿರಿಯ ತೋಟದಲ್ಲಿ ತಾಯಿ ಮಗಳನ್ನ ಕೊಂದಿತ್ತು.

ಎರಡು ವರ್ಷದ ಹಿಂದೆ ಬಿಡಾರದಲ್ಲಿ 27 ಆನೆಗಳಿದ್ದವು. ಆನೆ ಸಂಖ್ಯೆ ಹೆಚ್ಚಾದ್ದರಿಂದ ಒಡಂಬಡಿಕೆಯಂತೆ ಮಧ್ಯಪ್ರದೇಶ, ಉತ್ತರ ಪ್ರದೇಶಕ್ಕೆ ಆನೆಗಳನ್ನ ಕಳುಹಿಸಿದ್ದರು. ಈ ಮಧ್ಯೆ ಮೂರು ಆನೆಗಳು ಮೃತಪಟ್ಟವು. ಬಳಿಕ ಆನೆಗಳ ಸಂಖ್ಯೆ 17 ಕ್ಕೆ ಇಳಿದಿತ್ತು. ಈಗ ಒಟ್ಟು ಆನೆಗಳ ಸಂಖ್ಯೆ 20 ಕ್ಕೆ ಏರಿದೆ.

‘ ಈ ಕುರಿತು ಮಾತನಾಡಿದ ವನ್ಯಜೀವಿ ವಿಭಾಗದ ಡಿಎಫ್ ಓ ಪ್ರಸನ್ನ ಕೃಷ್ಣ ಪಟಗಾರ್, ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೀಟ್ ಪ್ಲಾಸ್ಟಿಕ್ ಪೊಲ್ಯೂಷನ್ ಎಂಬ ಥೀಮ್ ನೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದರ ಜೊತೆ ಸಕ್ರೆಬೈಲು ಆನೆಬಿಡಾರದ ಆನೆಗಳಿಗೂ ಸಹ ನಾಮಕರಣ ಮಾಡಿದ್ದೇವೆ. ಆರು ತಿಂಗಳ ಆನೆ ಮರಿಗೆ ಧ್ರುವ ಎಂದು, ಚಿಕ್ಕಮಗಳೂರಿನಲ್ಲಿ ಹಿಡಿದ ಆನೆಮರಿಗೆ ಕೃಷ್ಣ ಎಂದು, ಚನ್ನಗಿರಿಯಲ್ಲಿ ಹಿಡಿದ ಆನೆಗೆ ಅಭಿಮನ್ಯು ಎಂದು ಹೆಸರಿಡಲಾಗಿದೆ’ ಎಂದರು‌.

ಆರಗ ಜ್ಞಾನೇಂದ್ರ ಮಾತನಾಡಿ, ಇಲಾಖೆ ಉತ್ತಮ ಕೆಲಸಗಳನ್ನ ಮಾಡಿದೆ. ಒಂದು ದಿನದ ಪರಿಸರ ದಿನಾಚರಣೆ ಆಗಬಾರದು‌.‌ ಪ್ರತಿದಿನ ನಾವು ಆ ಕಾಳಜಿ ಇಟ್ಟುಕೊಳ್ಳಬೇಕು. ಆನೆಗಳಿಗೆ ಹೆಸರಿಡುವ ಕಾರ್ಯಕ್ರಮ ನನಗೆ ಖುಷಿ ನೀಡಿತು ಎಂದರು.

ಸಕ್ರೆಬೈಲು ಆನೆ ಬಿಡಾರ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ಒಂದು. ಮುಂಜಾನೆ ತುಂಗಾ ನದಿ ತೀರದಲ್ಲಿ ಆನೆಗಳ ಮೈ ತೊಳೆಯುವ ದೃಶ್ಯಗಳನ್ನ ನೋಡಲು ನಾನಾ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಬಿಡಾರದ ಆನೆಗಳು ಸುತ್ತಲ ಜಿಲ್ಲೆಗಳಲ್ಲಿ ಉಪಟಳ ನೀಡುವ ಕಾಡಾನೆಗಳನ್ನ ಸೆರೆಹಿಡಿಯಲು ಮಹತ್ವದ ಪಾತ್ರ ವಹಿಸಿವೆ.

Leave A Reply

Your email address will not be published.

error: Content is protected !!