ರಾಮಚಂದ್ರಾಪುರ ಮಠದಲ್ಲಿ ಕೃಷ್ಣಾರ್ಪಣಂ | ಗೋವುಗಳು ಬಂಧಮುಕ್ತವಾಗಿರಬೇಕೆನ್ನುವುದು ಮಠದ ಆಶಯ ; ಪೀಠಾಧಿಪತಿ ರಾಘವೇಶ್ವರ ಶ್ರೀಗಳು

0 222

ಹೊಸನಗರ : ಗೋಶಾಲೆಗಳನ್ನು ನಿರ್ಮಿಸಿ, ಮುನ್ನಡೆಸುವುದು ಸುಲಭದ ಕೆಲಸವಲ್ಲ. ರಾಮಚಂದ್ರಾಪುರ ಮಠದಲ್ಲಿನ ಗೋಶಾಲೆಗಳು ಹಲವು ವರ್ಷಗಳಿಂದ ದೇಸೀ ಗೋವುಗಳ ಸಂರಕ್ಷಣೆಯ ಪುಣ್ಯದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಮಠದ ಗೋಶಾಲೆಯಲ್ಲಿರುವ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೃಷ್ಣಾರ್ಪಣಂ ಕಾರ್ಯಕ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ದೇಸೀ ಸಂಕರ, ವಿದೇಶಿ ಗೋವುಗಳ ತಳಿಗಳು ಎಲ್ಲವೂ ಇದ್ದು, ಜನರಿಗೆ ಇದರ ಮಹತ್ವದ ಅರಿವು ಅಷ್ಟಾಗಿ ಇಲ್ಲದ ಕಾಲದಲ್ಲಿ ಶ್ರೀಮಠವು ಗೋಶಾಲೆ ಆರಂಭಿಸಿತು. ಈಗ ಜನತೆಗೆ ದೇಸೀಗೋತಳಿಗಳ ಸಂರಕ್ಷಣೆಗೆ ಈಗ ಅದೆಷ್ಟೋ ಜನರು ಮುಂದಾಗಿದ್ದಾರೆ. ಮಠದಲ್ಲಿ ಇಂದು ಗೋಶಾಲೆ ಯಶಸ್ವಿಯಾಗಿ ನಡೆಯುತ್ತಿದೆ. ಮಠದ ಭಕ್ತರು, ಸಮರ್ಥ ಕರ‍್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.

ವಿದೇಶಗಳಲ್ಲಿ ಗೋವುಗಳನ್ನು ದಾರುಣವಾಗಿ ವಧೆ ಮಾಡಲಾಗುತ್ತದೆ. ಗೋವುಗಳನ್ನು ಸಾಕುವ ಸ್ಥಳಗಳಲ್ಲಿಯೇ ಕಸಾಯಿಖಾನೆ ಸಹಾ ನಿರ್ಮಿಸಲಾಗುತ್ತದೆ. ಅವುಗಳನ್ನು ಕ್ರೂರವಾಗಿ ಸಾಕಲಾಗುತ್ತದೆ. ಭಾರತದಲ್ಲಿಯೂ ಗೋವುಗಳನ್ನು ಹಿಂಸಿಸುವ ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಿರುವುದು ದುರಂತ ಎಂದರು.

ಒಳ್ಳೆಯ ಕೆಲಸಗಳಿಗೆ ಶುಭಾರಂಭ ಕಷ್ಟ. ಆರಂಭವಾದ ಬಳಿಕ ಅದನ್ನು ಸರಿಯಾದ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗುವುದು ಇನ್ನೂ ಕಠಿಣ ಕೆಲಸ. ದೃಢ ಸಂಕಲ್ಪವಿದ್ದಲ್ಲಿ ಮಾತ್ರ ಅಂದುಕೊಂಡ ಕಾರ್ಯ ಯಶಸ್ವಿಯಾಗಿ ನೆರವೇರಲು ಸಾಧ್ಯ ಎಂದರು.

ಗೋಶಾಲೆಯಲ್ಲಿ ನಿರ್ಮಿಸಿರುವ ಗೋವರ್ಧನ ಗಿರಿಧಾರಿ ದೇವಸ್ಥಾನ ವಿಶೇಷತೆಯಿಂದ ಕೂಡಿದೆ. ಇಲ್ಲಿ ಸದಾ ಕೃಷ್ಣನ ಆರಾಧನೆಗೆ ಮಹತ್ವ ನೀಡಲಾಗಿದೆ. ವಿಷ್ಣು ಸಹಸ್ರನಾಮ ಪಠಣದಿಂದ ಸರ್ವ ಸಂಕಷ್ಟಗಳು ದೂರವಾಗುತ್ತವೆ. ಮುಂಬರುವ ದಿನಗಳಲ್ಲಿ ಮಠದಲ್ಲಿ ರಾಷ್ಟ್ರಮಟ್ಟದ ವಿಷ್ಣುಸಹಸ್ರನಾಮ ಸಮ್ಮೇಳನ ನಡೆಸುವ ಚಿಂತನೆ ನಡೆಸಲಾಗಿದೆ. ಸಾಂಕ್ರಾಮಿಕ ರೋಗಗಳ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ. ಒಬ್ಬರಿಂದ ಒಬ್ಬರಿಗೆ, ಒಂದೆಡೆಯಿಂದ ಮತ್ತೊಂದೆಡೆಗೆ ಹರಡುವುದು ಇದರ ಗುಣ ಎಂದರು.

ಕೃಷ್ಣಪ್ರಸಾದ್ ಯಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಬೆಳಗಿನಿಂದಲೂ ವಿವಿಧ ಧಾರ್ಮಿಕ ಕರ‍್ಯಕ್ರಮಗಳು ನಡೆಯಿತು. ಶ್ರೀಮದ್ಭಾಗವತ ಪಾರಾಯಣ ಸಮರ್ಪಣೆ, ಸಹಸ್ರಾಧಿಕ ವಿಷ್ಣುಸಹಸ್ರನಾಮ ಸಮರ್ಪಣೆ, ಸಹಸ್ರ ಛತ್ರ ಸಮರ್ಪಣೆ, ಗೋಮಾತೆಗೆ ಗೋಗ್ರಾಸ ಸಮರ್ಪಣೆ, ಪವಿತ್ರ ಶಿಲಾ ಸೋಪಾನಮಾಲೆ ಪೂಜೆ, ಗೋಪಾಲಕೃಷ್ಣ ಹವನ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನೆರವೇರಿದವು.

ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರ ನೇತೃತ್ವದಲ್ಲಿ ವಿಷ್ಣುಸಹಸ್ರನಾಮ ಸಮ್ಮೇಳನ ನಡೆಯಿತು. ವಿದ್ವಾಂಸ ಗೋಪಾಲಕೃಷ್ಣ ಭಟ್ ಹಂಡ್ರಮನೆ, ಭಾನುಪ್ರಕಾಶ್, ದಯಾನಂದ ರಾವ್, ಡಾ.ಸೀತಾರಾಮ್, ಡಾ.ಅಲ್ಕಜೆ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!