ಹೊಸನಗರ ತಾಲೂಕಿನಲ್ಲಿ ನಿಲ್ಲದ ಅಕ್ರಮ ಮರಳು ದಂಧೆ | ಅರಣ್ಯ ತಪಾಸಣೆ ಕೇಂದ್ರ ಗೇಟ್ ಮೂಲಕವೇ ನೂರಾರು ಲೋಡ್ ಅಕ್ರಮ ಮರಳು ಸಾಗಾಣಿಕೆ, ಸಿಬ್ಬಂದಿಗಳೇ ಶಾಮೀಲಾಗಿರುವ ಶಂಕೆ !?

0 1,247

ಹೊಸನಗರ : ಅಕ್ರಮ ಮರಳು ಸಂಗ್ರಹ ಹಾಗೂ ಸಾಗಾಣಿಕೆಗೆ ಕೊನೆಯೇ ಇಲ್ಲ ಎಂಬ ಮಾತು ಮತ್ತೊಮ್ಮೆ ಸಾಬೀತು ಆದಂತೆ ತೋರಿಬರುತ್ತಿದೆ.

ಹೌದು, ತಾಲೂಕಿನ ಈಚಲಕೊಪ್ಪ ಗ್ರಾಮದ ಮೂರು ಕೂಡಿಗೆ, ಹಲುಸಾಲೆ ಮಳವಳ್ಳಿ, ಹರಿದ್ರಾವತಿ, ತೋಟದಕೊಪ್ಪ, ಹಳೇ ಬಾಣಿಗ ಗ್ರಾಮದ ಜೋಡಿ ದೇವಸ್ಥಾನ ಸಮೀಪದ ಮುಡಬಾ ಹೊಳೆ, ವಿಜಾಪುರ, ಸಂಪಳ್ಳಿ ಮುಂತಾದ ಕಡೆಗಳಲ್ಲಿ ಪ್ರತಿ ರಾತ್ರಿ ಅಕ್ರಮ ಮರಳು ಸಂಗ್ರಹ ಹಾಗೂ ಸಾಗಾಟ ನಿರಂತರವಾಗಿ ನಡೆದಿದೆ. ಬೆಳಕಿನ ನದಿ ‘ಶರಾವತಿ’ ಹಿನ್ನೀರಿನಿಂದ ಮರಳು ಎತ್ತಲು ನೂರಾರು ಕೂಲಿ ಕಾರ್ಮಿಕರನ್ನು ದೂರದ ಉತ್ತರ ಪ್ರದೇಶ, ಒರಿಸ್ಸಾ ರಾಜ್ಯಗಳಿಂದ ಏಜೆಂಟರ ಮೂಲಕ ಕರೆಸಿಕೊಳ್ಳಲಾಗಿದೆ. ನದಿಯ ಹಿನ್ನೀರಿನಲ್ಲಿ ರಬ್ಬರ್ ಟ್ಯೂಬ್‌ಗಳನ್ನು ಬಳಸಿ, ಮರದ ತೆಪ್ಪದ ಮೂಲಕ ಮರಳನ್ನು ಮೇಲಕ್ಕೆತ್ತುವ ಕೂಲಿ ಕಾರ್ಮಿಕರ ಆರೋಗ್ಯದ ಮೇಲೆ ಮಾರಕ ದುಷ್ಪರಿಣಾಮ ಬೀರುವ ಅಕ್ರಮ ದಂಧೆ ಕಳೆದ ಹಲವು ತಿಂಗಳಿನಿಂದ ಈ ಭಾಗದಲ್ಲಿ ನಿರಾತಂಕವಾಗಿ ನಡೆದಿದೆ. ಅಕ್ರಮ ಮರಳು ಮಾಫಿಯ ತಡೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಚನೆಗೊಂಡಿರುವ ‘ಟಾಸ್ಕ್ ಫೋರ್ಸ್ ಸಮಿತಿ’ ನಿಶಬ್ದವಾಗಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ನದಿಪಾತ್ರವನ್ನೇ ಅಗೆದು ನೀರು ಹರಿಯುವ ದಿಕ್ಕನ್ನೆ ಬದಲಾಯಿಸಿರುವುದು. ರಬ್ಬರ್ ಟ್ಯೂಬ್ ಬಳಸಿ ಮರಳು ಸಂಗ್ರಹಣೆ ಮಾಡುತ್ತಿರುವುದು (ಒಳಚಿತ್ರ).

ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿ 766ಸಿ ರಲ್ಲಿ ನಿರ್ಮಿಸಿರುವ ಅರಣ್ಯ ತಪಾಸಣಾ ಕೇಂದ್ರ ಮೂಲಕವೇ ಪ್ರತಿದಿನ ತಡರಾತ್ರಿ ಹಾಗೂ ಮುಂಜಾನೆಯ ವೇಳೆಯಲ್ಲಿ ನೂರಾರು ಸಂಖ್ಯೆಯಲ್ಲಿ ಅಕ್ರಮ ಮರಳು ಟಿಪ್ಪರ್‌ಗಳು ಸಂಚರಿಸುತ್ತಿವೆ. ಇಲ್ಲಿನ ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಅಕ್ರಮದ ಪಾಲುದಾರರು ಎಂಬಂತೆ ತೋರಿಬರುತ್ತಿದ್ದು, ಈ ಅರಣ್ಯ ಗೇಟ್ ಮೂಲಕ ಹಾದು ಹೋಗುವ ಅಕ್ರಮ ಮರಳು ಲಾರಿಗಳು ಕುರಿತಂತೆ ಯಾವುದೇ ಮಾಹಿತಿ ದಾಖಲಾಗದಿರುವುದು ಅನುಮಾನಕ್ಕೆ ಕಾರಣವಾಗಿದೆ.

ಈಚಲಕೊಪ್ಪ, ಹಲುಸಾಲೆ ಮಳ್ಳವಳ್ಳಿಯ ಶರಾವತಿ ನದಿ ಹಿನ್ನೀರು ಪ್ರದೇಶ ಸಂಪರ್ಕಿಸುವ ಅರಣ್ಯ ಪ್ರದೇಶದಲ್ಲಿ ನೂರಾರು ಲೋಡುಗಳಷ್ಟು ಅಕ್ರಮ ಮರಳು ಸಂಗ್ರಹಣೆ ನಡೆದಿದೆ ಎನ್ನಲಾಗಿದೆ. ಹಳೇ ಬಾಣಿಗಾದ ಜೋಡಿ ದೇವಸ್ಥಾನದ ಸಮೀಪ ಹರಿಯುವ ಮುಡುಬಾ ಉಪನದಿ ಪಾತ್ರವನ್ನೆ ಅಕ್ರಮ ಮರಳು ಸಂಗ್ರಹಕಾರರು ಸಂಪೂರ್ಣ ಹಾಳುಗೊಡವುತ್ತಿದ್ದಾರೆ ಎಂಬ ದೂರುಗಳಿವೆ.

ಹಲುಸಾಲೆ ಮಳವಳ್ಳಿ ಹಾಗೂ ಶರಾವತಿ ನದಿ ಹಿನ್ನೀರ ಸಂಪರ್ಕ ರಸ್ತೆಯಲ್ಲಿನ ಅರಣ್ಯ ಪ್ರದೇಶದಲ್ಲಿ ನೂರಾರು ಲೋಡ್ ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು.

ಕಳೆದ ನವೆಂಬರ್ ತಿಂಗಳ ಮೊದಲ ವಾರದಲ್ಲೆ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಪತ್ರ ಮುಖೇನ ಉತ್ತರ ಪ್ರದೇಶ, ಒರಿಸ್ಸಾ ರಾಜ್ಯದ ಕೂಲಿ ಕಾರ್ಮಿಕರನ್ನು ಕೂಡಲೇ ಗಡಿಪಾರು ಮಾಡುವಂತೆ ಸ್ಪಷ್ಟ ಸಂದೇಶ ರವಾನಿಸಿದ್ದರೂ ಈವರೆಗೂ ಅವರ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಸ್ಥಳೀಯ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂಬರುವ ಬಿರಿ ಬೇಸಿಗೆ ಹಿನ್ನೆಲೆಯಲ್ಲಿ ಕೂಡಲೇ ಅಕ್ರಮ ಮರಳು ಮಾಫಿಯ ತಡೆಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸಲಿ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.

Leave A Reply

Your email address will not be published.

error: Content is protected !!