Hosanagara | ನಿರ್ವಹಣೆ ಇಲ್ಲದೆ ದುರಾವಸ್ಥೆ ತಲುಪಿದ ಬಿಎಸ್‌ಎನ್‌ಎಲ್‌ ಕಚೇರಿ !

0 266

ಹೊಸನಗರ: ಒಂದು ಕಾಲದಲ್ಲಿ ಏಕಸ್ವಾಮ್ಯ ಸ್ಥಾಪಿಸಿದ್ದ ಬಿಎಸ್‌ಎನ್‌ಎಲ್ ಸಂಸ್ಥೆಯು ನಷ್ಟದಲ್ಲಿದ್ದು ಬಹುತೇಕ ಕಾರ್ಯ ನಿಲ್ಲಿಸಲಿದೆ ಎನ್ನುವ ಮಾತು ಕಳೆದ ಕೆಲ ವರ್ಷಗಳಿಂದ ಹರಿದಾಡುತ್ತಿತ್ತು. ಈ ನಡುವೆ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಸಂಸ್ಥೆಗೆ ಪುನರ್ಜೀವ ನೀಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ ಬಿಎಸ್‌ಎನ್‌ಎಲ್‌ಗೆ ಸೇರಿದ ಕಟ್ಟಡ, ಆಸ್ತಿಗಳು ನಿರ್ವಹಣೆ ಕಾಣದೆ ವರ್ಷಗಳೇ ಕಳೆದಿವೆ.

ತಂತ್ರಜ್ಞಾನದ ಉನ್ನತೀಕರಣದ ಜೊತೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಆಸ್ತಿ-ಪಾಸ್ತಿಗಳ ನಿರ್ವಹಣೆ ಸವಾಲು ಎದುರಾಗಿದೆ. ಇದಕ್ಕೊಂದು ನಿದರ್ಶನ ಹೊಸನಗರ ಪಟ್ಟಣದ ಬಿಎಸ್‌ಎನ್‌ಎಲ್ ಕಛೇರಿಗೆ ಒಮ್ಮೆ ಬನ್ನಿ ನೋಡಿ ಆನಂದಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿ.

ದಶಕಗಳ ಈಚೆಗೆ ಈ ಕಟ್ಟಡಕ್ಕೆ ಸುಣ್ಣ-ಬಣ್ಣ ಬಳಿದಿಲ್ಲ. ಮಳೆ ಬಂದರೆ ಸೋರುವ ಆರ್‌ಸಿಸಿ ಚಾವಣಿ, ಕಿಟಕಿ ಗಾಜುಗಳು ಮರಿದು ಬೀಳುವಂತಹ ಸ್ಥಿತಿಯಲ್ಲಿ ನಿಂತಿವೆ. ವಿದ್ಯುತ್ ಅವಘಡಕ್ಕೆ ಆಹ್ವಾನ ನೀಡುತ್ತಿರುವ ಪವರ್‌ಹೌಸ್ ಕೊಠಡಿ, ಕಟ್ಟಡದ ಸುತ್ತಲೂ ಗಿಡ-ಗಂಟಿಗಳು ಬೆಳೆದು ಪಾಳು ಬಂಗಲೆಯಂತೆ ಕಾಣುವ ಗ್ರಾಹಕ ಸೇವಾ ಕೇಂದ್ರ, ಕಟ್ಟಡದ ಒಳಗಿರುವ ಯಂತ್ರೋಪಕರಣಗಳು ಮಳೆ ಬಂದಾಗ ನೀರಿನಲ್ಲಿ ತೋಯ್ದು ಹೋಗುವಂತಹ ಸ್ಥಿತಿ. ಹೀಗೆ ತೀರಾ ನಿಕೃಷ್ಟ ಅವಸ್ಥೆಗೆ ತಲುಪಿದ್ದರೂ ಕಟ್ಟಡದ ದುರಸ್ತಿಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.

ತಾಲೂಕಿನ ಗ್ರಾಮೀಣ ಪ್ರದೇಶದ ದೂರವಾಣಿ ವಿನಿಮಯ ಕೇಂದ್ರಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ದೂರವಾಣಿ ಸಂಪರ್ಕವೂ ಇಲ್ಲ, ಕಟ್ಟಡವೂ ಪಾಳು ಬಿದ್ದಿದ್ದು, ಬಳಕೆಗೆ ಬಾರದಂತಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿಒಂದು ಸಾವಿರಕ್ಕೂ ಹೆಚ್ಚು ಸ್ಥಿರ ದೂರವಾಣಿಗಳನ್ನು ಹೊಂದಿದ್ದ ಇಲ್ಲಿನ ವಿನಿಯಮ ಕೇಂದ್ರ ತನ್ನ ಕಳಪೆ ಸೇವೆಯಿಂದಾಗಿ ಇಂದು ಕೇವಲ 40 ಸಂಪರ್ಕಗಳನ್ನು ಹೊಂದಿದೆ. ಬಹುಪಾಲು ಸರ್ಕಾರಿ ಕಛೇರಿಗಳಲ್ಲಿರುವ ಈ ದೂರವಾಣಿಗಳು ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪವಿದೆ.

ಬಿಲ್ ಕೌಂಟರ್‌ ಇಲ್ಲ:
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿ ಕಛೇರಿಯತ್ತ ಸುಳಿಯದ ಕಾರಣ ಬಿಲ್ ಕೌಂಟರ್ ಮುಚ್ಚಲಾಗಿದೆ. ಹೀಗಾಗಿ ಗ್ರಾಹಕರು ಬಿಲ್ ಪಾವತಿಗೆ ಆನ್‌ಲೈನ್ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿದೆ. ಮೊಬೈಲ್ ಸಿಮ್ ಕಾರ್ಡ್, ಕರೆನ್ಸಿ ಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸುವ ಗ್ರಾಹಕ ಸೇವಾ ಕೇಂದ್ರ ಬಂದ್ ಆಗಿದೆ. ತಾಲೂಕಿನ ಬಿಎಸ್‌ಎನ್‌ಎಲ್‌ ಗ್ರಾಹಕರು ಸಮಸ್ಯೆಗಳು ಬಂದಾಗ ಪಕ್ಕದ ತಾಲೂಕುಗಳಿಗೆ ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ.

ಆಧಾರ್ ಸೆಂಟರ್ ಆರಂಭವಿಲ್ಲ:
ಕೆಲ ತಿಂಗಳ ಹಿಂದೆ ಇಲ್ಲಿನ ದೂರವಾಣಿ ಕೇಂದ್ರಕ್ಕೆ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಆಧಾರ್‌ ಕಾರ್ಡ್ ಕೇಂದ್ರ ಮಂಜೂರಾಗಿತ್ತು. ಕೇಂದ್ರದ ನಿರ್ವಹಣೆಯ ಗುತ್ತಿಗೆ ಪಡೆದ ಸಂಸ್ಥೆಯವರು ಈವರೆಗೂ ಆಧಾರ್‌ ಕಾರ್ಡ್ ಕೇಂದ್ರ ಸ್ಥಾಪಿಸಲು ಆಸಕ್ತಿ ತೋರಿಲ್ಲ. ಪ್ರಸ್ತುತ ತಾಲೂಕುಕ ಛೇರಿಯಲ್ಲಿ ಆಧಾರ್‌ ತಿದ್ದುಪಡಿಗೆ ಹೆಚ್ಚಿನ ಜನ ಸಂದಣಿ ಇದ್ದು, ಇಲ್ಲಿಯೂ ಆಧಾರ್‌ ಕೇಂದ್ರ ಇದ್ದಿದ್ದರೆ ಜನಸಾಮಾನ್ಯರಿಗೆ ಅನುಕೂಲವಾಗುತ್ತಿತ್ತು.

ಜಾಗದ ಸಮಸ್ಯೆ:
ಬಿಎಸ್‌ಎನ್‌ಎಲ್‌ ಕೇಂದ್ರದ ಕಾಂಪೌಂಡ್ ಒಳ ಭಾಗದಲ್ಲಿರುವ ಖಾಲಿ ಜಾಗ ಪಕ್ಕದ ಇನ್ನೊಂದು ಸರ್ಕಾರಿ ಸಂಸ್ಥೆಯ ಒಡೆತನಕ್ಕೆ ಸೇರಿದೆ ಎನ್ನಲಾಗುತ್ತಿದ್ದು, ಖಾಲಿ ಜಾಗದಲ್ಲಿ ಕಲ್ಲು ಮಣ್ಣುಗಳನ್ನು ತಂದು ಸುರಿಯಲಾಗಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್‌ ಕಛೇರಿಗೆ ತೆರಳಲು ದಾರಿಯೇ ಸರಿ ಇಲ್ಲದಂತಾಗಿದೆ. ಕಛೇರಿಗೆ ಒದಗಿಸಿರುವ ಪ್ರತ್ಯೇಕ ದಾರಿ ಅಭಿವೃದ್ಧಿಯಾಗದೇ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಒಎಫ್‌ಸಿ ನಿರ್ವಹಣೆ ಸಂಕಷ್ಟ:
ಸಂಸ್ಥೆಯು ತನ್ನ ಒಎಫ್‌ಸಿ ಕೇಬಲ್‌ಗಳ ನಿರ್ವಹಣೆ ಕಾರ್ಯವನ್ನು ಹೊರಗುತ್ತಿಗೆ ಮೂಲಕ ನಡೆಸುತ್ತದೆ. ಆದರೆ ಕಳೆದ ಒಂದು ವರ್ಷದಿಂದಲೂ ಗುತ್ತಿಗೆದಾರ ತಾಲೂಕಿನಲ್ಲಿ ಒಎಫ್‌ಸಿ ಕೇಬಲ್ ನಿರ್ವಹಣೆ ಕಾರ್ಯ ನಡೆಸುತ್ತಿಲ್ಲ. ಇದರಿಂದ ಸಿಬ್ಬಂದಿ ಕೊರತೆ ಇದ್ದರೂ ಅನಿವಾರ್ಯವಾಗಿ ಬಿಎಸ್‌ಎನ್‌ಎಲ್ ಸಿಬ್ಬಂದಿ, ತಂತ್ರಜ್ಞರೇ ದುರಸ್ತಿ ಕಾರ್ಯ ನಡೆಸಬೇಕಾಗಿದೆ. ಇದರಿಂದ ಸಕಾಲದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದೇ, ಸಂಪರ್ಕ ಕಡಿತಗೊಳ್ಳಲು ಪ್ರಮುಖ ಕಾರಣವಾಗಿದೆ.

ಸಂಸದರ ಗಮನಕ್ಕೆ:
ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರಿಗೆ ಹೊಸನಗರ ಗಾಯತ್ರಿ ಮಂದಿರದಲ್ಲಿ ನಡೆದ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಕಾರ್ಯದಲ್ಲಿ ಜನ ಸಂಪರ್ಕ ಸಭೆ ಏರ್ಪಡಿಸಿದ್ದ ಸಂದರ್ಭದಲ್ಲಿ ಪತ್ರಕರ್ತರು ಹೊಸನಗರ ಬಿಎಸ್‌ಎನ್‌ಎಲ್ ಕಛೇರಿಯ ದುಸ್ಥಿತಿಯ ಬಗ್ಗೆ ಗಮನಕ್ಕೆ ತರಲಾಗಿದ್ದರೂ ಇಲ್ಲಿಯವರೆಗೆ ಸಂಸದರು ಸ್ಪಂದಿಸಿಲ್ಲ. ಜನಸಾಮಾನ್ಯರು ಅಲ್ಲಿಗೆ ತೆರಳಲು ಅಸಾಧ್ಯ ಎನ್ನುವಂತಹ ಸ್ಥಿತಿ ಇದ್ದು ಇನ್ನು ಒಳಭಾಗದಲ್ಲಿ ದುರಸ್ತಿ ಕಾರ್ಯ ಆಗದಿದ್ದಲ್ಲಿ, ಕಟ್ಟಡವೇ ಬಿದ್ದು ಹೋದರೂ ಆಶ್ಚರ್ಯವಿಲ್ಲ. ಅಕಾರಿಗಳು ಯಾಕಿಷ್ಟು ತಾತ್ಸಾರ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಇನ್ನಾದರೂ ಕಟ್ಟಡಕ್ಕೆ ತುರ್ತಾಗಿ ದುರಸ್ತಿ ಆಗಲಿದೇಯೇ ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!