Shikaripura | ಭತ್ತದ ಕಟಾವು ಆರಂಭ, ಇಳುವರಿ ಕೊರತೆ ಸಾಧ್ಯತೆ ; ಕೃಷಿ ನಿರ್ದೇಶಕ ಕಿರಣ್ ಹತ್ರಿ

0 1,254

ಶಿಕಾರಿಪುರ : ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು (Rain) ನೀರಾವರಿ ಸೌಲಭ್ಯ ಹೊಂದಿರುವ ರೈತರು ನಾಟಿ ಮಾಡಿದ ಭತ್ತವು (Paddy) ಕೊಯ್ಲಿಗೆ ಬಂದಿದ್ದು, ಈಗಾಗಲೇ ಕೊಯ್ಲು ಪ್ರಾರಂಭವಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್ ಹತ್ರಿ ತಿಳಿಸಿದರು. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 1730 ಹೆಕ್ಟೇರ್, ಅಂಜನಾಪುರ ಹೋಬಳಿಯಲ್ಲಿ 1580 ಹೆಕ್ಟೇರ್ , ಹೊಸೂರು ಹೋಬಳಿಯಲ್ಲಿ 1480 ಹೆಕ್ಟೇರ್, ಉಡುಗಣಿ ಹೋಬಳಿಯಲ್ಲಿ 1880 ಹೆಕ್ಟೇರ್, ತಾಳಗುಂದ ಹೋಬಳಿಯಲ್ಲಿ 3300 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಒಟ್ಟು ತಾಲ್ಲೂಕಿನಲ್ಲಿ 9970 ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ನಾಟಿ ಮಾಡಲಾಗಿದೆ. ತಾಲ್ಲೂಕಿನಲ್ಲಿ 48.90 ಕ್ವಿಂಟಾಲ್‌ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ ಸರಾಸರಿ ಇಳುವರಿ ಇದ್ದು, ಬರಗಾಲ ನಿಮಿತ್ತ ಇಳುವರಿ ಕಡಿಮೆಯಾಗುವ ನಿರೀಕ್ಷೆಯಿದೆ. ಒಟ್ಟಾರೆ 4.8 ಲಕ್ಷ ಕ್ವಿಂಟಾಲ್‌ ಉತ್ಪಾದನೆಯನ್ನು ನಿರೀಕ್ಷಿಸಬಹುದಾಗಿದೆ ಎಂದರು.

ಈ ಹಂತದಲ್ಲಿ ಭತ್ತ ಕಟಾವು ಮಾಡಲು ಭತ್ತ ಕೊಯ್ಲು ಯಂತ್ರಗಳಿಗೆ ರೈತರು ಅವಲಂಭಿಸಿದ್ದು, 2022ನೇ ಸಾಲಿನಲ್ಲಿ  ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರು ಭತ್ತ ಕಟಾವು ಮತ್ತು ಬೇಲರ್‌ ಯಂತ್ರಗಳ ಏಜಂಟರುಗಳ ಸಭೆಯಲ್ಲಿ ಟೈಯರ್‌ ಮಾದರಿ ಕಂಬೈನ್ಡ ಹಾರ್ವೆಸ್ಟರ್‌ ಗೆ ಜಿಲ್ಲೆಯಾದ್ಯಂತ ರೂ.1800 ಪ್ರತಿ ಗಂಟೆಗೆ ಮತ್ತು ಚೈನ್‌ ಮಾದರಿ ಕಂಬೈನ್ಡ ಹಾರ್ವೆಸ್ಟರ್‌ ಗೆ ರೂ. 2450 ಪ್ರತಿ ಗಂಟೆಗೆ ದರವನ್ನು ನಿಗದಿಗೊಳಿಸಿರುತ್ತಾರೆ ಮತ್ತು ಭತ್ತದ ಹುಲ್ಲನ್ನು ಪೆಂಡಿ ಕಟ್ಟುವ ಯಂತ್ರಕ್ಕೆ ಪ್ರತಿ ಪೆಂಡಿಗೆ ರೂ.40 ನಿಗದಿಗೊಳಿಸಿರುತ್ತಾರೆ. 

2023-24ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಬೆಳೆದ ಭತ್ತವನ್ನು ರೈತರಿಂದ ನೇರವಾಗಿ ಖರೀದಿಸಲು ಕರ್ನಾಟಕ ಸರ್ಕಾರ ಆದೇಶ ಮಾಡಿದ್ದು, ಶಿಕಾರಿಪುರ ತಾಲ್ಲೂಕಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಇವರನ್ನು ಖರೀದಿ ಏಜನ್ಸಿಯಾಗಿ ನೇಮಕ ಮಾಡಲಾಗಿದೆ. ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕಚೇರಿಯನ್ನು ತೆರೆಯಲಾಗಿದ್ದು, ಭತ್ತ ಸಾಮಾನ್ಯಕ್ಕೆ  ರೂ. 2183 ಪ್ರತಿ ಕ್ವಿಂಟಾಲ್‌ ಗೆ ಮತ್ತು ಭತ್ತ- ಎ ಗ್ರೇಡ್-‌ ರೂ. 2203 ಪ್ರತಿ ಕ್ವಿಂಟಾಲ್‌ ಗೆ ಸರ್ಕಾರವು ದರಗಳನ್ನು ನಿಗದಿಪಡಿಸಿದೆ. 

ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ ನಷ್ಟು ಗರಿಷ್ಠ ಒಬ್ಬ ರೈತರಿಂದ 40 ಕ್ವಿಂಟಾಲ್‌ ಭತ್ತವನ್ನು ಮಾತ್ರ ಖರೀದಿಸುತ್ತಾರೆ. ಭತ್ತ ಮಾರಾಟ ಮಾಡಲು ಇಚ್ಚಿಸುವ ರೈತರು ನ.15 ರಿಂದ ತಮ್ಮ ಎಫ್‌ ಐ ಡಿ ಸಂಖ್ಯೆ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ ಪುಸ್ತಕದೊಂದಿಗೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಹೆಸರನ್ನು ಆನ್‌ಲೈನ್‌ನಲ್ಲಿ ನೊಂದಾಯಿಸಬಹುದಾಗಿದೆ. ನೊಂದಾಯಿಸಿದ ರೈತರಿಂದ ಮಾತ್ರ ಭತ್ತವನ್ನು ಖರೀದಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಭತ್ತ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. 

Leave A Reply

Your email address will not be published.

error: Content is protected !!