Shivamogga | ಇ-ಸ್ಟೋರ್ ಹೆಸರಿನಲ್ಲಿ ನಂಬಿಕೆ ದ್ರೋಹ, ಲಕ್ಷಾಂತರ ರೂ. ವಂಚನೆ ; ಕ್ರಮಕ್ಕೆ ಮನವಿ

0 679

ಶಿವಮೊಗ್ಗ : ಇ-ಸ್ಟೋರ್ (E-Store) ಹೆಸರಿನಲ್ಲಿ ನಂಬಿಕೆ ದ್ರೋಹ ಮಾಡಿ ವಂಚಿಸಿ ಹಣ ನೀಡದೆ ಕೊಲೆ ಬೆದರಿಕೆ ಹಾಕಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಿವಮೊಗ್ಗದ ಮಾಲತೇಶ್, ರವಿಕುಮಾರ್, ಅಮೃತ ಹಾಗೂ ಇತರರು ಜಿಲ್ಲಾ ರಕ್ಷಣಾಧಿಕಾರಿ (Shivamogga SP) ಮಿಥುನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.


ಶಿವಮೊಗ್ಗ ತಾಲ್ಲೂಕಿನ ಸುಮಾರು ಹದಿನೈದು ಜನ ಇ-ಸ್ಟೋರ್ ಹೆಸರಿನ ಸಂಸ್ಥೆಗೆ ಹಣ ಹೂಡಲು ಮನವೊಲಿಸಿ ಏನಾದರೂ ಮೋಸವಾದರೆ ನಾವೇ ಕೊಡುವುದಾಗಿ ಹೇಳಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಚಿರಾಗ್ ಅರ್ಥ್ ಮೂವರ್ಸ್ ನ ರೇವಪ್ಪ ಗೌಡ, ಶಿವಮೊಗ್ಗದ ಶಿಕ್ಷಕ ಉಮೇಶ್, ರಾಣೆಬೆನ್ನೂರಿನ ವೀರೇಂದ್ರ ಪಾಟೀಲ್ ಎಂಬುವರು ಸೇರಿ ನಮಗೆ ನಂಬಿಕೆ ದ್ರೋಹ ಮಾಡಿ ಲಕ್ಷಾಂತರ ರೂ. ಕಟ್ಟಿಸಿಕೊಂಡು ಈಗ ಹಣ ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ನಾವು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದು, ಇವರು ಇ-ಸ್ಟೋರ್ ನಂತಹ ಹತ್ತಾರು ಸಂಸ್ಥೆಗಳ ಮೇಲೆ ನಮಗೆ ನಂಬಿಕೆ ತೋರುವಂತೆ ಮಾಡಿ ನಮ್ಮಿಂದ ಹಣ ಕಟ್ಟಿಸಿಕೊಳ್ಳುವ ಜೊತೆ ಸಂಪೂರ್ಣ ಜವಾಬ್ದಾರಿ ಹೊತ್ತು ವಾಪಸ್ ಕೊಡುತ್ತೇವೆ ಎಂದು ಹಣವನ್ನು ಸಹ ಕೊಡದೆ ವಂಚಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.


ಈ ಮೂವರು ನಮ್ಮ ಹಣವನ್ನು ಇ-ಸ್ಟೋರ್ ಗೆ ಹಣ ಕಟ್ಟಿದ್ದಾರೋ ಇಲ್ಲವೋ ಎಂಬುದು ಸಹ ನಮಗೆ ಗೊತ್ತಿಲ್ಲ. ಮೊದಲು ನಿಮಗೆ ಹಣ ಬರುತ್ತದೆ ಎಂದು ಹೇಳುತ್ತಲೇ ದಿನ ತಳ್ಳುತ್ತಿದ್ದ ರೇವಪ್ಪ ಗೌಡ ಈಗ ಹಣದ ವಿಚಾರ ಕೇಳಿದರೆ ಯಾರ ಬಳಿ ಹೇಳಿದರೂ ನನ್ನನ್ನು ಏನು ಮಾಡಲು ಆಗುವುದಿಲ್ಲ. ನಮ್ಮ ಹುಡುಗರಿಗೆ ಹೇಳಿ ನಿಮಗೆ ಬಡಿಸುತ್ತೇನೆ. ನನ್ನ ತಂಟೆಗೆ ಬರಬೇಡಿ ಎಂದು ಬೆದರಿಸುತ್ತಿದ್ದಾರೆಂದು ಹೇಳಿದ್ದಾರೆ.


ನಾವು ಈ ವಿಚಾರದಲ್ಲಿ ಈಗಾಗಲೇ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದು ಕೂಡಲೇ ಇವರನ್ನು ಕರೆಸಿ, ಅವನ ಜೊತೆಗೆ ನಮ್ಮ ನಿಯತ್ತಿನ ದುಡಿಮೆಯ ಹಣವನ್ನು ವಾಪಸ್ ಕೊಡಿಸಲು ಹಾಗೂ ಅವರ ವಿರುದ್ಧ ಕೊಲೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶಿಕ್ಷೆ ಕೊಡಿಸುವಂತಹ ಪ್ರಕರಣವನ್ನು ದಾಖಲಿಸಲು ವಿನಂತಿಸಿದ್ದಾರೆ.

ಅಮಾಯಕರಾದ ನಮ್ಮನ್ನು ವಂಚಿಸಿ ನಂಬಿಕೆ ದ್ರೋಹ ಮಾಡಿದ್ದಾರೆ. ದಾಖಲೆ ಕೇಳಿದರೆ ಏನು ಇಲ್ಲ ಎಂಬ ಕುಂಟು ನೆಪ ಹೇಳುತ್ತಾ ವಂಚಿಸುತ್ತಿರುವ ರೇವಪ್ಪಗೌಡ ಸೇರಿದಂತೆ ಬಹಳಷ್ಟು ಜನ ಇದೇ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚಿಸಿದ್ದು, ತಾವುಗಳು ಈ ಪ್ರಕರಣವನ್ನು ಭೇದಿಸಿ ನ್ಯಾಯ ಕೊಡಿಸುವ ಮೂಲಕ ಸಾವಿರಾರು ಜನರಿಗೆ ನ್ಯಾಯ ಕೊಡಿಸಬೇಕೆಂದು ಕೋರಿದ್ದಾರೆ.

ಜಯನಗರ ಇನ್ಸ್ ಸ್ಪೆಕ್ಟರ್ ಗೆ ಎಸ್.ಪಿ ಸೂಚನೆ:
ಮನವಿ ಸ್ವೀಕರಿಸಿ ಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಗೆ ಸೂಚನೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಪ್ರಕರಣದ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದಾರೆ.

ಇಂತಹ ಆಮೀಷಗಳಿಗೆ ಬಲಿಯಾಗದಿರಲು ಮಿಥುನ್ ಕುಮಾರ್ ಕರೆ:

ಇ-ಸ್ಟೋರ್ ನಂತಹ ಸಂಸ್ಥೆಗಳಿಗೆ ಹಣವನ್ನು ತೊಡಗಿಸುವ ಮೂಲಕ ದುರಾಸೆಯ ಪ್ರಕ್ರಿಯೆಗೆ ಜನರು ಕೈ ಹಾಕಬಾರದು. ಇಂತಹ ಸಂಸ್ಥೆಗಳ ವಿರುದ್ಧ ಈಗಾಗಲೇ ದೊಡ್ಡ ಮಟ್ಟದ ವಿಚಾರಣೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಹತ್ತಾರು ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಇದೊಂದು ನಂಬಿಕೆ ದ್ರೋಹದ ಕೆಲಸವಾಗಿದೆ ಜನ ಎಚ್ಚರಿಕೆಯಿಂದ ಇರಬೇಕು. ಮೋಸಕ್ಕೆ ಒಳಗಾಗಬಾರದು ಎಂದು ಕರೆ ನೀಡಿದ್ದಾರೆ.

ಮೋಸಕ್ಕೊಳಗಾದವರು ಸಂಪರ್ಕಿಸಿ:
ಇ-ಸ್ಟೋರ್ ಹೆಸರಿನಲ್ಲಿ ಲಕ್ಷಾಂತರ ರೂ ಕಳೆದುಕೊಂಡವರು ಒಗ್ಗಟ್ಟಾಗಿ ನಮ್ಮ ಹಣ ಪಡೆಯಲು ಕೆಲಸ ಮಾಡಬೇಕಾಗಿದೆ. ಇಲ್ಲಿ ಮೋಸಕ್ಕೆ ಒಳಗಾದವರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ. ಅದರಲ್ಲಿ ನಿಮಗೆ ನಂಬಿಕೆ ದ್ರೋಹ ಮಾಡಿದವರ Stability ಪ್ರಕರಣ ದಾಖಲಿಸುವಂತೆ ಮಾಡಿ. ಹೆಚ್ಚಿನ ವಿವರ ಹಾಗೂ ಸಂಪರ್ಕಕ್ಕೆ 9986237799, 7899574555,7204824788, 9980065925 ಗೆ ಕರೆ ಮಾಡಬಹುದು.

Leave A Reply

Your email address will not be published.

error: Content is protected !!