ಸೊರಬ: ಅರಣ್ಯ ಸಂರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸುವ ಜೊತೆಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದು ಉಪವಲಯ ಅರಣ್ಯ ಅಧಿಕಾರಿ ಎನ್.ಯು ಹನುಮಂತಪ್ಪ ಹೇಳಿದರು.
ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ರಥಭೀದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಅರಣ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯಕ್ಕೆ ಬೆಂಕಿ ತಗಲದಂತೆ ಎಚ್ಚರಿಕೆ ವಹಿಸಬೇಕು. ಕಾಡು ನಾಡಿನ ಸಂಪತ್ತು ಆಗಿದೆ. ವನ್ಯಜೀವಿಗಳು ಪ್ರಕೃತಿಯ ಬಹುಮುಖ್ಯ ಅಂಗ ಅವುಗಳ ರಕ್ಷಣೆ ಸಹ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಅರಣ್ಯಗಳಿಗೆ ಬೆಂಕಿ ತಗುಲಿ ಗಿಡ ಮರಗಳು ಹಾಗೂ ಅರಣ್ಯ ಜೀವ ರಾಶಿಗಳು ನಾಶವಾಗಿರುವದು ಕಳವಳಕಾರಿ ಸಂಗತಿ. ಹೀಗಾಗಿ ಜನರಿಗೆ ಅರಣ್ಯಗಳ ಬಗ್ಗೆ ಕಾಳಜಿ ಮೂಡುವಂತೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಶ್ರೀ ರೇಣುಕಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಅರಣ್ಯ ರಕ್ಷಕ ಪ್ರವೀಣ್ ಸಿ. ಮಡಿವಾಳ, ಪ್ರವೀಣ್ ಮಿರ್ಜಿ, ಗಂಗಾಧರ್ ಮರಡಿ, ಪ್ರವೀಣ್ ಶೇಟ್, ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಊರಿನ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.
“ಮರವನ್ನು ಕಡಿಯಬೇಡ ಓ ಮನುಜ. ಮರವನ್ನು ಬೆಳೆಸಿ ನೋಡ. ಮಳೆ ಇಲ್ಲದೆ ಬೆಳೆ ಇಲ್ಲದೆ ಬರಗಾಲ ಬಂದು ಹೋಯಿತು. ನೀರಿನ ಬವಣೆಯಿಂದ ಊರೇ ತತ್ತರಿಸಿ ಹೋಯಿತು ಓ ಮನುಜ ಮರವನ್ನ ಕಡಿಯಬೇಡ ಎಂಬ ಜನಪದ ಗೀತೆ ಮೂಲಕ ಸಾರ್ವಜನಿಕರಿಗೆ ಮೈಸೂರಿನ ಜಾಗೃತಿ ಕಲಾತಂಡದವರು ಬೀದಿ ನಾಟಕದೊಂದಿಗೆ ಅರಣ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು.”