ಸೊರಬ: ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಚಂದ್ರಗುತ್ತಿ ಶೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ನಡೆಯಲಿದೆ. ಫೆಬ್ರವರಿ 25 ರಂದು ಕಂಕಣ ಬಂಧನ, ಧ್ವಜಾರೋಹಣ ಭೇರಿತಾಡನೆ, 26 ಕ್ಕೆ ಕಳಶ ಸ್ಥಾಪನೆ, ಯಾಗಶಾಲೆ ಪ್ರವೇಶ, ವೃಷಭ ಯಂತ್ಯೋತ್ಸವ, 27ಕ್ಕೆ “ಪುಷ್ಪ ಮಂಜರಿ ಯಂತ್ರೋತ್ಸವ” ಸಣ್ಣತೇರು, 28ಕ್ಕೆ ಮಹಾರಥೋತ್ಸವ ದೊಡ್ಡತೇರು, ಮಾರ್ಚ್ 1 ರಂದು ಅವಭ್ರಥೋತ್ಸವ ಓಕಳಿ, 2 ಕ್ಕೆ ತುಲಾಭಾರ ವಗೈರ ಹರಕೆ ಸೇವೆಗಳು ಜರುಗಲಿವೆ. ಈ ನಿಟ್ಟಿನಲ್ಲಿ ದೇವಸ್ಥಾನದ ರಥಬೀದಿ ಆವರಣ ಸ್ವಚ್ಛತೆ ಜೊತೆಗೆ ಕಟ್ಟಡಗಳಿಗೆ ದೇವಸ್ಥಾನದ ಮೆಟ್ಟಿಲುಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ.
ಸುದ್ದಿಗಾರರ ಜೊತೆ ಮಾತನಾಡಿದ ಶೀ ರೇಣುಕಾಂಬ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ರಥೋತ್ಸವಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಮತ್ತು ದೇವಸ್ಥಾನ ಸಮಿತಿಯಿಂದ ಪೂರ್ವ ಸಿದ್ಧತೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಾಗರ ಉಪವಿಭಾಗಾಧಿಕಾರಿ ಅವರ ನೇತೃತ್ವದಲ್ಲಿ ಜಾತ್ರಾ ಪೂರ್ವಭಾವಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ತಾಲೂಕು ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿಯವರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಅವರಿಗೆ ರಥೋತ್ಸವದ ಪೂರ್ವ ಸಿದ್ಧತೆ ತಯಾರಿ ಬಗ್ಗೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಜವಾಬ್ದಾರಿ ವಹಿಸಿದ್ದಾರೆ ಎಂದು ತಿಳಿಸಿದರು.
ಭಕ್ತರ ಸಹಕಾರದಿಂದ ರಥೋತ್ಸವಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ಸೇವೆ ನಡೆಸಲು ತೀರ್ಮಾನಿಸಿದ್ದೇವೆ. ಜಾತ್ರಾ ಪೂರ್ವ ತಯಾರಿಯಲ್ಲಿ ದೇವಸ್ಥಾನದ ಸಮಿತಿ ಸದಸ್ಯರು ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
“2023 ನೇ ಸಾಲಿನ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಾಗರ ಉಪವಿಭಾಗಾಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಸೂಚಿಸಿರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು.“
– ವಿ.ಎಲ್ ಶಿವಪ್ರಸಾದ್, ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ, ಸದಸ್ಯ ಪ್ರವೀಣ್ ಮಿರ್ಜಿ, ಬೋವಿ ಪರಶುರಾಮ್ ಸೇರಿದಂತೆ ಮತ್ತಿತರರಿದ್ದರು.