ಸಂಭ್ರಮದಿಂದ ನಡೆದ ರೋಮಾಂಚನಕಾರಿ ಹೋರಿ ಬೆದರಿಸುವ ಹಬ್ಬ

0 87

ಸೊರಬ: ತಾಲೂಕಿನ ಶಿಗ್ಗಾ ಗ್ರಾಮದಲ್ಲಿ ಶ್ರೀ ಅವಳಂಬಿಕ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಏರ್ಪಡಿಸಿದ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವು ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ರೋಮಾಂಚನಕಾರಿ ಹೋರಿ ಹಬ್ಬವನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಹೋರಿ ಪ್ರಿಯರು ಜಮಾಯಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ಮಹತ್ವವಿದ್ದು, ಹೋರಿ ಮಾಲೀಕರು ಹೋರಿಗಳಿಗೆ ಬಗೆಬಗೆಯ ಜೂಲಾ, ಬಲೂನ್, ರಿಬ್ಬನ್, ಒಣಕೊಬ್ಬರಿ, ಮತ್ತು ಕಾಲ್ಗೆಜ್ಜೆ ಕಟ್ಟಿ ಕಂಗೊಳಿಸುವಂತೆ ಸಿಂಗರಿಸಿದ್ದರು,

ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು‌. ಯುವಕರು ಹೋರಿಗಳ ಹೆಸರಿನ ಧ್ವಜವನ್ನು ಹಿಡಿದು ಅಂಕಣದ ಸುತ್ತಲು ಸಂಭ್ರಮದಿಂದ ಕುಣಿಯುತ್ತ ಓಡಾಡುತ್ತಿದ್ದರು. ಪ್ರವೇಶ ದ್ವಾರದಿಂದ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಹೂವು, ಬಣ್ಣ ಬಣ್ಣದ ಶಾಟ್ಸ್ ಗಳನ್ನು ಹಾರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ತೇರಿನಂತೆ ಕಾಣುವ ಪೀಪಿ ಹೋರಿ ಅಖಾಡದಲ್ಲಿ ಇಳಿಯುತ್ತಿದಂತೆ ಇತ್ತ ಹೋರಿ ಅಭಿಮಾನಿಗಳಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿ ಕೇಳಿ ಬರುತ್ತಿದ್ದವು,

ಅಖಾಡದಲ್ಲಿ ಚಿಕ್ಕಾವಲಿ ನಾಗ, ಶಿಗ್ಗಾದ ಕ್ರೇಜಿಸ್ಟಾರ್, ಮರೂರು ತಾರಕಾಸುರ, ಜಕನಹಳ್ಳಿ ಮುತ್ತು, ಮಲೆನಾಡ ಮಹಾರಾಜ, ತಿಮ್ಮಲಾಪುರ ಜಂಪಿಂಗ್ ಸ್ಟಾರ್, ಕುಪ್ಪಗಡ್ಡೆಯ ರಾವಣ, ಎಳಗೇರಿ ಉಡಾಳ, ಹರಿಗಿ ಗ್ಯಾಂಗ್ ಸ್ಟಾರ್, ಚಿಕ್ಕೋಟಿ ಗ್ಯಾಂಗ್ ಸ್ಟಾರ್, ಹಾತನ್ಕಟ್ಟೆ ಕಾ ನಾಯಕ, ಕರ್ನಾಟಕ ಕಿಂಗ್, ಗೇರ್ಕೊಪ್ಪ ಪ್ರಳಯಾಂತಕ, ಇಂಡೊಳ್ಳಿ ಕರ್ಣ ಸೇರಿದಂತೆ ಜನಪದ ಸಂಸ್ಕೃತಿಯ ಪ್ರತೀಕವಾದ ಹಬ್ಬದಲ್ಲಿ 300ಕ್ಕೂ ಹೆಚ್ಚಿನ ವಿವಿಧ ಹೆಸರಿನ ಹೋರಿಗಳು ಅಖಾಡದಲ್ಲಿ ಓಡಿದವು.

ಹೋರಿ ಹಬ್ಬ ಆಯೋಜಿಸಿದ ಶಿಗ್ಗಾ ಗ್ರಾಮದ ಶ್ರೀ ಅವಳಂಬಿಕ ಯುವಕ ಸಂಘದವರು ಅಖಾಡದಲ್ಲಿ ಸುರಕ್ಷಿತವಾದ ಕ್ರಮ ಕೈಗೊಂಡು‌‌. ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದರು. ಉತ್ತಮವಾಗಿ ಓಡಿದ ಹೋರಿಗಳನ್ನು ಮತ್ತು ಬಲಪ್ರದರ್ಶಿಸಿದ ಪೈಲ್ವಾನರನ್ನು ಗುರುತಿಸಲಾಯಿತು.

Leave A Reply

Your email address will not be published.

error: Content is protected !!