ಚಂದ್ರಗುತ್ತಿ ; ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆದ ಬನ್ನಿ ಉತ್ಸವ

0 701

ಸೊರಬ: ಇಲ್ಲಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬನ್ನಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ತಾಲೂಕು ಸೇರಿದಂತೆ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಾದ್ಯಂತ ಲಕ್ಷಾಂತರ ಭಕ್ತರು ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ವಿಜಯದಶಮಿಯಂದು ಆಗಮಿಸಿ ಮಲೆನಾಡಿನ ಶಕ್ತಿ ದೇವತೆ ರೇಣುಕಾ ದೇವಿಯ ದರ್ಶನ ಪಡೆದು ಉದೋ ಉದೋ ಎಂದು ಜೈಕಾರ ಹಾಕುತ್ತಾ ಭಕ್ತಿ ಸಮರ್ಪಿಸಿದರು.

ವಿಜಯದಶಮಿಯ ಬಹುಮುಖ್ಯಘಟವಾದ ಬನ್ನಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಸಮೀಪದ ನ್ಯಾರ್ಶಿ ಗ್ರಾಮದ ಬನ್ನಿಮಂಟಪದಲ್ಲಿ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿಯನ್ನು ಇರಿಸಿ ಬನ್ನಿ ಮುಡಿಯುವ ಆಚರಣೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಮಾರಿಕೊಪ್ಪದ ಭಕ್ತರು ಬನ್ನಿ ಅರ್ಪಿಸಿದರು. ಬನ್ನಿ ಉತ್ಸವಕ್ಕೆ ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಚಾಲನೆ ನೀಡಿದರು.

ಬಂದಂತಹ ಸಮಸ್ತ ಭಕ್ತಾದಿಗಳು, ಸ್ಥಳೀಯ ಜನಪ್ರತಿನಿಧಿಗಳು, ಚುನಾಯಿತ ಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿ ವರ್ಗದವರಿಗೆ ಸಂಪ್ರದಾಯದಂತೆ ಬನ್ನಿ ನೀಡಿದರು.

ನಂತರ ಬನ್ನಿಮಂಟಪದಿಂದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಆಗಮ ಶಾಸ್ತ್ರದ ವಿಧಿ ವಿಧಾನಗಳೊಂದಿಗೆ ಸಮಸ್ತ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಸೊರಬ ಸಿ.ಪಿ.ಐ ರಾಜಶೇಖರ್ ಎಲ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ ರತ್ನಾಕರ, ನ್ಯಾರ್ಶಿ ಗ್ರಾಪಂ ಅಧ್ಯಕ್ಷ ಧನಂಜಯ್ ಡಿ ನಾಯ್ಕ್, ತಾಪಂ ಮಾಜಿ ಸದಸ್ಯ ಎನ್.ಜಿ ನಾಗರಾಜ್, ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್ ಶ್ರೀಧರ್ ಹುಲ್ತಿಕೊಪ್ಪ, ಸುರೇಂದ್ರ ಗೌಡ ಸೇರಿದಂತೆ ಚಂದ್ರಗುತ್ತಿ ನ್ಯಾರ್ಶಿ ಸುತ್ತಮುತ್ತ ಊರಿನ ಗ್ರಾಮಸ್ಥರು ಭಕ್ತಾದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!