ಜಡೆ ಗ್ರಾ.ಪಂ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0 41

ಸೊರಬ: ತಾಲೂಕಿನ ಜಡೆ ಗ್ರಾಮ ಪಂಚಾಯ್ತಿಗೆ ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಮಿತ್‌ಗೌಡ ಅಧ್ಯಕ್ಷರಾಗಿ ಹಾಗೂ ಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.


17 ಸದಸ್ಯರ ಬಲವುಳ್ಳ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ’ಬ’ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ’ಅ’ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಗೌಡ ಅವರು ನಾಮಪತ್ರ ಹಿಂಪಡೆದರು. ನಂತರ ನಡೆದ ಚುನಾವಣೆಯಲ್ಲಿ ಅಮಿತ್ ಗೌಡ 12 ಮತಗಳನ್ನು ಪಡೆದರೆ, ಎಸ್. ರಾಜು 5 ಮತಗಳನ್ನು ಪಡೆದರು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಮ್ಮ 13 ಪಡೆದರೆ, ಎಸ್. ಕೆಂಚಮ್ಮ ನಾಲ್ಕು ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಧನಂಜಯಪ್ಪ ಕರ್ತವ್ಯ ನಿರ್ವಹಿಸಿದರು. ಗ್ರಾಪಂ ಪಿಡಿಒ ಎಸ್. ಚಿದಾನಂದ ಸಹಕರಿಸಿದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿಲ್ಲದಿದ್ದರೂ ಸಹ ಗ್ರಾಪಂ ಸದಸ್ಯರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದಾರೆ. ಕ್ಷೇತ್ರದಲ್ಲಿ ಸುಮಾರು 18 ಗ್ರಾಪಂ ಆಡಳಿತ ಬಿಜೆಪಿಯ ತೆಕ್ಕೆಗೆ ಬರಲಿದೆ. ಜಡೆ ಪಂಚಾಯ್ತಿಯಲ್ಲಿ ಈ ಹಿಂದಿನ ಅಧ್ಯಕ್ಷರು ಉತ್ತಮವಾಗಿ ಆಡಳಿತ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉತ್ತಮವಾದ ಜನಪರ ಆಡಳಿತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ನೂತನ ಅಧ್ಯಕ್ಷ ಅಮಿತ್ ಗೌಡ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರ ಮಾರ್ಗದರ್ಶನದೊಂದಿಗೆ ಪಂಚಾಯ್ತಿಯಲ್ಲಿ ಅಧಿಕಾರವನ್ನು ಸ್ಥಾಪಿಸಲು ಸಾಧ್ಯವಾಯಿತು. ಹಾಲಿ ಶಾಸಕರ ಬೆಂಬಲಿಗರು ಬಿಜೆಪಿ ಬೆಂಬಲಿತ ಸದಸ್ಯರನ್ನು ಸಂಪರ್ಕ ಮಾಡಿದ್ದರು. ಆದರೆ, ಪಕ್ಷಕ್ಕೆ ಬದ್ಧರಾಗಿದ್ದ ಸದಸ್ಯರ ಸಹಕಾರದಿಂದ ಜಡೆ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತರು ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವುದಾಗಿ ತಿಳಿಸಿದರು.

ಗ್ರಾಪಂ ಸದಸ್ಯರಾದ ನಾಗರಾಜ ಗೌಡ, ಪಾಲಾಕ್ಷಪ್ಪ, ರಮೇಶ, ವಿರೂಪಾಕ್ಷಪ್ಪ, ಶೋಭಮ್ಮ, ಪೂಜಾ, ಸುಜಾತಮ್ಮ, ಶೈಲಾ, ಮುಖಂಡರಾದ ಡಾ.ಎಚ್.ಇ. ಜ್ಞಾನೇಶ್, ಗುರುಕುಮಾರ್ ಪಾಟೀಲ್, ರಾಜುಗೌಡ ತುಮರಿಕೊಪ್ಪ, ನಾಗರಾಜ ಗೌಡ, ಪ್ರಕಾಶ್ ಗೌಡ, ಅಭಿಷೇಕ್ ಗೌಡ ಬೆನ್ನೂರು, ಸುರೇಶ್ ಉದ್ರಿ, ಶಿವಮೂರ್ತಿ ಗೌಡ, ನಾಗರಾಜ ಕಲ್ಕೊಪ್ಪ, ರಾಘವೇಂದ್ರ ಜಡೆ, ವಿನಯ್ ಗೌಡ, ಶಿವಕುಮಾರ್ ಗೌಡ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!