ಕೊರೊನಾ ಪಾಸಿಟಿವ್ ಇದ್ದರು ಮಾಸ್ಕ್ ಧರಿಸದೆ ಗ್ರಾಪಂಗೆ ಭೇಟಿ ನೀಡಿದ ಇಬ್ಬರಿಗೆ ಜೈಲು ಶಿಕ್ಷೆ !

0 61

ತೀರ್ಥಹಳ್ಳಿ: ಕೊರೊನಾ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಇದರ ನಿಯಂತ್ರಣಕ್ಕಾಗಿ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತಲ್ಲದೆ, ಕೊರೊನಾ ಪಾಸಿಟಿವ್ ಆದರೆ ಅಂತವರಿಗೆ ಕ್ವಾರಂಟೈನ್ ಮಾಡಲಾಗುತ್ತಿತ್ತು.

ಕೊರೊನಾ ಪಾಸಿಟಿವ್ ಇದ್ದರೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರು ವ್ಯಕ್ತಿಗಳಿಗೆ ತೀರ್ಥಹಳ್ಳಿಯ ಹಿರಿಯ ಸಿಜೆ ಮತ್ತು ಜೆಎಂಎಸ್‌ಸಿ ನ್ಯಾಯಾಲಯ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.

ಪ್ರಕರಣದ ವಿವರ:

ತೀರ್ಥಹಳ್ಳಿ ತಾಲ್ಲೂಕು ಹೊಸಳ್ಳಿಯ ಮಹೇಶ್ ಅವರಿಗೆ ಪಾಸಿಟಿವ್ ಇದ್ದು, ಹೀಗಿದ್ದರೂ ಸಹ ತಮ್ಮ ಸ್ನೇಹಿತ ಮಂಜುನಾಥ್ ಜೊತೆಗೆ 2021 ರ ಮೇ 9ರಂದು ಹೊಸಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಮಾಸ್ಕ್ ಕೂಡ ಧರಿಸಿರಲಿಲ್ಲ.

ಹೀಗಾಗಿ ಇವರಿಬ್ಬರ ವಿರುದ್ಧ ಅಂದಿನ ಪಿಡಿಓ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಂದಿನ ವೃತ್ತ ನಿರೀಕ್ಷಕ ಪ್ರವೀಣ್ ನೀಲಮ್ಮನವರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆದು ಇದೀಗ ಇಬ್ಬರಿಗೂ ತಲಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಮಹೇಶ್ ಅವರಿಗೆ 50,000 ರೂಪಾಯಿ ದಂಡ ವಿಧಿಸಿದ್ದು, ಪಾವತಿಸಲು ವಿಫಲರಾದರೆ ಒಂದು ವರ್ಷ ಸಾದಾ ಜೈಲು ಶಿಕ್ಷೆ ಮತ್ತು ಮಂಜುನಾಥ್ ಅವರಿಗೆ 1,000 ರೂಪಾಯಿ ದಂಡ ವಿಧಿಸಿದ್ದು ಪಾವತಿಸಲು ವಿಫಲರಾದರೆ ಮೂರು ತಿಂಗಳು ಸಾದಾ ಶಿಕ್ಷೆ ನೀಡಿ ಆದೇಶಿಸಲಾಗಿದೆ.

ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕಿ ಡಿ.ಜೆ. ಪ್ರೇಮಲೀಲಾ ವಾದ ಮಂಡಿಸಿದ್ದರು.

Leave A Reply

Your email address will not be published.

error: Content is protected !!