ಶಿವಮೊಗ್ಗ : ದಲಿತರು ಮತ್ತು ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಹೊರಗಿಡುವಂತೆ ತೋರುವ ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಕ್ರಮವನ್ನು ದೇಶದ ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಅತ್ಯಾಚಾರ ಎಂದು ಕರೆದಿರುವ ಅವರು, ಕೇಂದ್ರ ಸರ್ಕಾರವು ಕೇವಲ ಒಂದು ತಿಂಗಳ ಅವಧಿಯಲ್ಲಿ ಎಸ್ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಂದಾಗಿದೆ. ಇದರಿಂದ ಅಲ್ಪಸಂಖ್ಯಾತರು ಮತ್ತು ದಲಿತರ ಹಕ್ಕುಗಳಿಗೆ ಭಾರೀ ಹಾನಿಯಾಗುತ್ತದೆ ಎಂದು ತೀವ್ರವಾಗಿ ಟೀಕಿಸಿ, ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕಾಗಿತ್ತು, ಆದರೆ ಸರ್ಕಾರದ ಹಠಾತ್ ನಿರ್ಧಾರವೇ ಅನುಮಾನಗಳಿಗೆ ದಾರಿ ಹಾಕುತ್ತಿದೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಈ ಎಸ್ಐಆರ್ ಪ್ರಕ್ರಿಯೆಯಿಂದ ಈಗಾಗಲೇ 91 ಲಕ್ಷ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದು, 21 ಲಕ್ಷ ಮತದಾರರ ತಕರಾರು ಇನ್ನೂ ಬಾಕಿ ಇದೆ ಎಂದು ಅವರು ಉದಾಹರಣೆ ನೀಡಿ, “ನಾವು ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸುವುದಿಲ್ಲ. ಆದರೆ, ಕೇವಲ ಒಂದು ತಿಂಗಳ ಸಮಯದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ ಯಾಕೆ?” ಎಂದು ಪ್ರಶ್ನಿಸಿದರು. ಮುಂದಿನ ಚುನಾವಣೆಗೆ ಇದು ಸಾಧ್ಯವಿಲ್ಲದಿದ್ದರೆ, ಮುಂದಿನ ಅವಧಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮತ್ತೊಂದು ಪ್ರಮುಖ ವಿಚಾರವಾಗಿ, ಚುನಾವಣಾ ಆಯೋಗ ಉಲ್ಲೇಖಿಸಿರುವ 12 ದಾಖಲೆಗಳಲ್ಲಿ ಹೆಸರು ಸಾಮ್ಯತೆ ಇಲ್ಲದಿದ್ದರೂ ಅಥವಾ ಕನ್ನಡ, ಇಂಗ್ಲಿಷ್ ಸ್ಪೆಲಿಂಗಿನಲ್ಲಿ ವ್ಯತ್ಯಾಸ ಇದ್ದರೂ ಸಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಹೀಗಾಗಿ, ಎಸ್ಐಆರ್ ಪ್ರಕ್ರಿಯೆಗೆ ಕನಿಷ್ಠ ಒಂದು ವರ್ಷ ಸಮಯ ನೀಡಬೇಕೆಂದು ಅವರು ಆಗ್ರಹಿಸಿದರು.
ಈ ಪ್ರಕ್ರಿಯೆಯ ಮೂಲಕ ಜನರನ್ನು ಮತದಾರರ ಪಟ್ಟಿಯಿಂದ ಹಿಂಪಡೆಯುವ ದುಷ್ಟ ಉದ್ದೇಶಗಳಿವೆ ಎಂದು ಅವರು ಆರೋಪಿಸಿ, ಇಂತಹ ನೀತಿಗಳು ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಸೀಮಿತವಾಗಿವೆ ಎಂದು ವಿವರಣೆ ನೀಡಿದರು. ನ್ಯಾಯಾಲಯವೂ ಬಿಜೆಪಿ ಪಕ್ಷದ ಪರವಾಗಿ ಜನ ವಿರೋಧಿ ತೀರ್ಪುಗಳನ್ನು ನೀಡುತ್ತಿರುವುದರಿಂದ ನ್ಯಾಯತಂತ್ರದ ಮೇಲಿನ ನಂಬಿಕೆ ಕುಸಿಯುತ್ತಿದೆ ಎಂದು ಅವರು ಖಂಡಿಸಿದರು. ಬಿಜೆಪಿ ಪರವಾದ ಕ್ರಿಮಿನಲ್ ಪ್ರಕರಣಗಳಲ್ಲಿ ತೀರ್ಪು ನೀಡಿದ ನ್ಯಾಯಾಧೀಶರು ಸರ್ಕಾರದಲ್ಲಿ ಉತ್ತಮ ಸ್ಥಾನಗಳನ್ನು ಪಡೆದಿರುವುದನ್ನು ಕಿಮ್ಮನೆ ರತ್ನಾಕರ್ ಗಂಭೀರವಾಗಿ ಆರೋಪಿಸಿದರು.

ಹೆಚ್ಚಾಗಿ, ಚುನಾವಣಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಹೊರತುಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಪಕ್ಷವು ಜಾತಿ ಮತ್ತು ಧರ್ಮವನ್ನು ರಾಜಕಾರಣದಲ್ಲಿ ಬಳಸಿಕೊಂಡು ದೇಶದ ರಾಜಕೀಯ ವ್ಯವಸ್ಥೆಯನ್ನು ಕುಗ್ಗಿಸುತ್ತಿದ್ದು, ಭಾರತವನ್ನು ಇನ್ನೊಂದು ಅಫ್ಘಾನಿಸ್ತಾನ್ ಅಥವಾ ತಾಲಿಬಾನ್ ಸ್ಥಿತಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದು ಟೀಕಿಸಿದರು.
ಇಂದಿಗೂ ಹರಿಜನರನ್ನು ದೇವಸ್ಥಾನದ ಒಳಗೆ ಬಿಡದೆ ಅವರನ್ನು ತುಳಿಯಲು ಕೆ.ಎಸ್.ಈಶ್ವರಪ್ಪನವರಂತಹ ಸಂತತಿಗಳೆ ಕಾರಣ. ಕೆ.ಎಸ್.ಈಶ್ವರಪ್ಪ ಸಹೃದಯ ಮನುಷ್ಯ ಆದರೆ ಮಾಧ್ಯಮ ಹಾಗೂ ವೇದಿಕೆಗಳು ಕಂಡರೆ ಅವರ ನಾಲಿಗೆ ನಿಲ್ಲುವುದಿಲ್ಲ. ತಮಗೆ ತೋಚಿದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ
ಮುಖ್ಯಮಂತ್ರಿಯಾದಾಗ ಅವರನ್ನು ಟೀಕೆ ಮಾಡುತ್ತಿದ್ದರು. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಮಾಧ್ಯಮಗಳು ಕಂಡರೆ ಸಾಕು ಹೀಗೆಲ್ಲಾ ಮಾತನಾಡಬೇಕೆಂದು ಅವರಿಗೆ ಅನಿಸುತ್ತದೆ.
– ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಕೆ.ಎಸ್.ಈಶ್ವರಪ್ಪ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಅವಾಚ್ಯ ಶಬ್ದಗಳಿಂದ ಟೀಕೆ ಮಾಡಿದ್ದು, ಇದು ಅವರ ಹಿರಿತನಕ್ಕೆ ಒಳ್ಳೆಯದಲ್ಲ ಎಂದರು.
ಈಶ್ವರಪ್ಪನವರಿಗೆ ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುವ ಚಟ ಹೋಗಿಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಕೆಟ್ಟ ಪದಗಳನ್ನು ಬಳಸುವ ಮೂಲಕ ಟೀಕೆ ಮಾಡಿದ್ದಾರೆ. ಇದು ಅವರ ರಾಜಕೀಯ ಅನುಭವ ಹಾಗೂ ವಯಸ್ಸಿಗೆ ಶೋಭೆ ತರುವುದಿಲ್ಲ ಎಂದರು.
ಈಶ್ವರಪ್ಪ ಅನುಭವಿ ರಾಜಕಾರಣಿ ಅವರ ಮೇಲೆ ಅಪಾರ ಗೌರವವಿದೆ. ಆದರೆ ರಾಜಕಾರಣಕ್ಕೆ ಏನೇನೋ ಮಾತನಾಡಬಾರದು. ಈಗ ಈಶ್ವರಪ್ಪನವರೆ ತಮ್ಮ ಮಗನ ರಾಜಕೀಯ ಭವಿಷ್ಯಕ್ಕೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಮಗನನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ ನಾವಾಗಲಿ, ನಮ್ಮ ಪಕ್ಷವಾಗಲಿ ಯಾವತ್ತು ಅದರ ಬಗ್ಗೆ ಟೀಕೆ ಮಾಡಿಲ್ಲ. ಆದರೆ ಈಶ್ವರಪ್ಪ ಅಂತಹ ಸೌಜನ್ಯವನ್ನು ಕಾಪಾಡಿಕೊಳ್ಳಲು ಆಗುತ್ತಿಲ್ಲ. ಏನೇ ಇರಲಿ ಈಶ್ವರಪ್ಪ ಮಗನ ರಾಜಕೀಯ ಭವಿಷ್ಯಕ್ಕೆ ಹಾಗೂ ಅದಕ್ಕಾಗಿ ನಡೆಯುತ್ತಿರುವ ಪ್ರಯತ್ನಕ್ಕೆ ಶುಭಾವಾಗಲಿ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಪ್ರಮುಖರು ಶಿವಕುಮಾರ್, ಇಸ್ಮಾಯಿಲ್ ಖಾನ್, ಶ್ವೇತಾಬಂಡಿ, ಸೈಯದ್ ವಾಹಿದ್ ಅಡ್ಡು, ಯು. ಶಿವಾನಂದ್, ಎಸ್.ಟಿ. ಹಾಲಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





