ರಿಪ್ಪನ್ಪೇಟೆ : ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹೊಸನಗರ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಗೋರಗೋಡು ಗ್ರಾಮದ 9 ವರ್ಷದ ಬಾಲಕ ನಂದನ್ ಜೆ.ಸಿ.ತನ್ನ ಸಾಹಸ ಹಾಗೂ ಸಮಯಪ್ರಜ್ಞೆಯ ಮೂಲಕ ಸಾಬೀತುಪಡಿಸಿದ್ದಾನೆ.
ಹೌದು, ನಂದನ್ ತಂದೆ ಚಂದ್ರು ಗೋರಗೋಡು ಸಮೀಪದ ಹೊಳೆಯ ಬಳಿ ತೆರಳಿದ್ದರು. ಇದೇ ವೇಳೆ ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ಹೊಳೆಯಂಚಿನಿಂದ ಜಾರಿ ನೀರಿಗೆ ಬಿದ್ದಿದ್ದು ಹರಿಯುವ ನೀರಿನೊಂದಿಗೆ ಸುಮಾರು ದೂರ ತೇಲಿ ಹೋಗಿದ್ದಾರೆ. ಈ ದೃಶ್ಯವನ್ನು ಕಂಡ ನಂದನ್ ಗಾಬರಿಗೊಳ್ಳದೆ ಹೊಳೆಯ ದಡದ ಮೇಲೆ ಕೂಗಿಕೊಳ್ಳುತ್ತಾ ಓಡಾತ್ತಾ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ ತನ್ನ ತಂದೆ ಹೊಳೆಯಲ್ಲಿ ತೇಲಿ ಹೋಗಿದ್ದಾರೆ ಬನ್ನಿ ಕಾಪಾಡಿ ಎಂದು ಅಂಗಲಾಚುತ್ತಿದ್ದನ್ನು ಗಮನಿಸಿದ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದರು. ಈ ವೇಳೆ ಹೊಳೆಯಲ್ಲಿ ತೇಲುತ್ತಿದ್ದ ಜರ್ಕಿನ್ ನನ್ನು ನಂದನ್ ಗುರುತಿಸಿ ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆ ತಂದು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಬಾಲಕನ ಧೈರ್ಯ ಸಾಹಸಕ್ಕೆ ಮೆಚ್ಚುಗೆ :
ತಂದೆ ಅಪಾಯದಲ್ಲಿದ್ದಾಗ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ನಡೆದುಕೊಂಡ ಬಾಲಕ ಜೆ.ಸಿ.ನಂದನ್ ಅವರ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಸಾಹಸಿ ಬಾಲಕ ಗೋರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ದಲಿತ ಕುಟುಂಬದ ಚಂದ್ರು-ಗಾಯಿತ್ರಿ ದಂಪತಿಯ ಪುತ್ರ. ತಂದೆ-ತಾಯಿ ದಿನಗೂಲಿ ಕಾರ್ಮಿಕರಾಗಿ ತೋಟದ ಕೆಲಸ ಮಾಡಿ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.
ಸರ್ಕಾರದಿಂದ ಪ್ರೋತ್ಸಾಹಕ್ಕೆ ಆಗ್ರಹ ;
ಇಂತಹ ಅಪರೂಪದ ಸಾಹಸ ಪ್ರದರ್ಶಿಸಿದ ಜೆ.ಸಿ.ನಂದನ್ಗೆ ರಾಜ್ಯ ಸರ್ಕಾರ ಪ್ರಶಸ್ತಿ, ಶಿಕ್ಷಣ ಸಹಾಯಧನ ಹಾಗೂ ಸಾರ್ವಜನಿಕ ಗೌರವ ನೀಡಿ ಪ್ರೋತ್ಸಾಹಿಸಬೇಕು ಎಂದು ಸ್ಥಳೀಯರ ಆಗ್ರಹವಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





