ಶೃಂಗೇರಿ ; ಕಾರು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಈ ವಿಚಾರಕ್ಕೆ ಅನ್ಯಧರ್ಮಿಯರ ಕಾರು ಅಡ್ಡಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.
ಶೃಂಗೇರಿ ಬಸ್ ನಿಲ್ದಾಣದ ಬಳಿ ಬಜರಂಗದಳದ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಐವರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.

ಶೃಂಗೇರಿ ಪಟ್ಟಣದಲ್ಲಿನ ದರ್ಗಾಕ್ಕೆ ಕೊಪ್ಪ ಮೂಲದ ಮುಸ್ಲಿಂ ಕುಟುಂಬ ಮೂರು ಕಾರಿನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹರಿಹರಪುರ ಸಮೀಪ ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿದೆ. ಈ ವಿಚಾರವಾಗಿ ಶೃಂಗೇರಿ ಪಟ್ಟಣದಲ್ಲಿ ಮುಸ್ಲಿಂ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದು ಹಲ್ಲೆಯಿಂದ ಗಾಯಗೊಂಡವರನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪ ಡಿವೈಎಸ್ ಪಿ ಬಾಲಾಜಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಬೈಕ್ ಕಾರು ಅಪಘಾತ ಪ್ರಕರಣ ಹಾಗೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದ್ದಾರೆ.
ಶೃಂಗೇರಿ ತಾಲೂಕಿನವರಾದ ನಾಗೇಂದ್ರ, ರವಿಸಂಜಯ್, ಕೀರ್ತನ್, ಪ್ರಸಾದ್ ಹಾಗೂ ರಜತ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಓಮ್ನಿ ಕಾರು, ಹೋಂಡಾ ಆಕ್ಟಿವಾ ಸ್ಕೂಟಿ, ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಪ್ರಗತಿಯಲ್ಲಿದೆ.
– ಡಾ.ವಿಕ್ರಮ್ ಅಮಟೆ, ಎಸ್ಪಿ