ನಾಪತ್ತೆಯಾಗಿದ್ದ ಯುವಕನ ಶವ 3 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆ !

0 1,074

ಮೂಡಿಗೆರೆ : ತಾಲ್ಲೂಕಿನ ಬಾಳೂರು ಹೋಬಳಿಯ ಪ್ರಸಿದ್ಧ ಪ್ರವಾಸಿ ತಾಣ (Tourist Spot) ರಾಣಿಝರಿ (Rani Jhari) ಬಳಿಯಲ್ಲಿ ನಾಪತ್ತೆಯಾಗಿದ್ದ (Missing) ಯುವಕ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ.

ರಾಣಿಝರಿ ಬಳಿಯ ಬೆಟ್ಟವೊಂದರಿಂದ ಸುಮಾರು ಮೂರು ಸಾವಿರ ಅಡಿ ಆಳಕ್ಕೆ ಬಿದ್ದು ಯುವಕ ಮೃತಪಟ್ಟಿದ್ದಾನೆ. ಯುವಕ ಬೆಟ್ಟದಿಂದ ಪ್ರಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಬೆಂಗಳೂರು ಮೂಲದ ಭರತ್ (30) ಸಾವಿಗೀಡಾಗಿರುವ ಯುವಕ. ಡಿ. 6ರಂದು ಬೆಂಗಳೂರಿನಿಂದ ದುರ್ಗದಹಳ್ಳಿ ಸಮೀಪದ ರಾಣಿಝರಿಗೆ ಟ್ರಕ್ಕಿಂಗ್ ಎಂದು ಬಂದಿದ್ದ ಯುವಕ ನಾಪತ್ತೆಯಾಗಿದ್ದ. ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮೊಬೈಲ್ ನಾಟ್ ರೀಚಬಲ್ ಆಗಿತ್ತು. ರಾಣಿಝರಿ ಬಳಿ ಯುವಕನ ಬೈಕ್ ನಿಲ್ಲಿಸಲಾಗಿತ್ತು. ಬೈಕ್ ಬಳಿಯಲ್ಲಿ ಮೊಬೈಲ್, ಟೀ ಶರ್ಟ್, ಚಪ್ಪಲಿ ಸಿಕ್ಕಿದ್ದವು. ಬೈಕ್ ಗೆ ಐಡಿ ಕಾರ್ಡ್ ಮತ್ತು ಬ್ಯಾಗ್ ಸಿಕ್ಕಿಸಿ ನಾಪತ್ತೆಯಾಗಿದ್ದ.

ಶುಕ್ರವಾರ ಬೆಂಗಳೂರಿನಿಂದ ಅವರ ಕುಟುಂಬದವರು ಆಗಮಿಸಿದ್ದರು. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಶನಿವಾರ ಬೆಳಿಗ್ಗೆಯಿಂದ ಯುವಕನ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗಿತ್ತು.

ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಅವರ ಸ್ನೇಹಿತರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಏಳೆಂಟು ಡ್ರೋಣ್ ಕ್ಯಾಮೆರಾಗಳನ್ನು ಬಳಸಿಯೂ ಶೋಧ ನಡೆಸಲಾಗಿತ್ತು.

ನಿನ್ನೆ ಮಧ್ಯಾಹ್ನದ ಹೊತ್ತಿಗೆ ಯುವಕ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯ ನಡೆಸುತ್ತಿದ್ದ ತಂಡ ಸುಮಾರು 25 ಮಂದಿಯ ತಂಡ ಮೈದಾಡಿ ಕಡೆಯಿಂದ ಬೆಟ್ಟವನ್ನು ಇಳಿದು ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶವವನ್ನು ಪತ್ತೆ ಹಚ್ಚಿದೆ. ಸುಮಾರು 3 ಸಾವಿರ ಅಡಿಯಿಂದ ಯುವಕ ಕೆಳಗೆ ಬಿದ್ದಿದ್ದು, ಆತನ ದೇಹ ಛಿದ್ರವಾಗಿದ್ದು, ಕೊಳೆತ ಸ್ಥಿತಿಗೆ ತಲುಪಿದೆ ಎಂದು ತಿಳಿದುಬಂದಿದೆ.

ವ್ಯೂ ಪಾಯಿಂಟ್ ನಿಂದ ಹಾರಿ ಆತ್ಮಹತ್ಯೆ ?
ರಾಣಿಝರಿ ಸಮೀಪದಲ್ಲಿರುವ ವ್ಯೂ ಪಾಯಿಂಟ್ ನಿಂದಲೇ ಯುವಕ ಕೆಳಗೆ ಹಾರಿರುವ ಸಾಧ್ಯತೆಯಿದೆ ಎನ್ನಲಾಗಿದೆ. ವ್ಯೂ ಪಾಯಿಂಟ್ ನೇರದಲ್ಲಿಯೇ ಶವ ಪ್ರಪಾತದಲ್ಲಿ ಪತ್ತೆಯಾಗಿದೆ. ಯುವಕ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಭರತ್ ಇಂಜಿನಿಯರ್ ಪದವೀಧರನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

Leave A Reply

Your email address will not be published.

error: Content is protected !!