ಬರಗಾಲದಿಂದ ರೈತರು, ಜಾನುವಾರು ತತ್ತರ ; ಕ್ರಮಕ್ಕೆ ಎಎಪಿ ಒತ್ತಾಯ

0 128

ಚಿಕ್ಕಮಗಳೂರು : ಜಿಲ್ಲೆಯನ್ನು ಬರಗಾರ ಪ್ರದೇಶವೆಂದು ಘೋಷಿಸಿರುವ ಸರ್ಕಾರ ಎಷ್ಟರ ಮಟ್ಟಿಗೆ ರೈತರಿಗೆ ಸೌಲಭ್ಯ ಹಾಗೂ ಜಾನುವಾರುಗಳಿಗೆ ಮೇವು ಸರಬರಾಜುಗೊಂಡಿವೆ ಎಂಬುದರ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರಗೌಡ ಪ್ರಶ್ನಿಸಿದ್ದಾರೆ.


ಈ ಕುರಿತು ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದ್ದು ಉಸ್ತುವಾರಿ ಸಚಿವರು ಗೋವುಗಳಿಗೆ ಮೇವು ಒದಗಿಸಿರುವ ಮತ್ತು ಬರಪೀಡಿತ ಪ್ರದೇಶಕ್ಕೆ ನೀರು ಸರಬರಾಜು ಯಾವ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂಬುದರ ಮಾಹಿತಿಯನ್ನು ಹೇಳಬೇಕಿದೆ ಎಂದಿದ್ದಾರೆ.


ಬಯಲುಸೀಮೆ ಗ್ರಾಮದ ಜನತೆ ಹಾಗೂ ಸಾಕುಪ್ರಾಣಿಗಳು ಬರಗಾಲದಿಂದ ತತ್ತರಿಸಿ ಕುಡಿಯುವ ನೀರಿಗೂ ಹಾಹಕಾರಪಡುವಂತಾಗಿದೆ. ಈ ಸಂಬಂಧ ಉಸ್ತುವಾರಿ ಸಚಿವರು ರೈತರ ಬದುಕು ಕಟ್ಟಿಕೊಳ್ಳಲು ಯಾವ ರೀತಿಯಲ್ಲೂ ಕ್ರಮವಹಿಸದಿರುವುದು ಜನರ ಮೇಲಿರುವ ವಿಶ್ವಾಸವನ್ನು ತೋರ್ಪಡಿಸುತ್ತದೆ ಎಂದಿದ್ದಾರೆ.


ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಕೈ ಮುಗಿಯುವುದನ್ನು ಬಿಟ್ಟರೆ ಬೇರ‍್ಯಾವ ಚಟುವಟಿಕೆ ಹಾಗೂ ರೈತರಿಗೆ ಸವಲತ್ತುಗಳನ್ನು ಒದಗಿಸುವುದು ಕಾಣಿಸುತ್ತಿಲ್ಲ. ಮತದಾರರ ತಾಳ್ಮೆ ಪರೀಕ್ಷಿಸುವ ಮೊದಲೇ ಸರ್ಕಾರವು ಎಚ್ಚೆತ್ತುಕೊಂಡು ರೈತರ ಬದುಕನ್ನು ಪುನಶ್ಚೇತನಗೊಳಿಸಬೇಕು. ಸಮಯಕ್ಕೆ ಮೇವನ್ನು ಒದಗಿಸಿ ಗೋವುಗಳ ಸುಸ್ಥಿತಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.


ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆದು ಮುಂದಿನ ಜೂನ್ ಮಾಹೆಯವರೆಗೆ ಸಾಕು ಪ್ರಾಣಿಗಳ ಸಂರಕ್ಷಣೆ ರಾಜ್ಯಸರ್ಕಾರ ಮುಂದಾಗಬೇಕು. ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸರ್ಕಾರಕ್ಕೆ ತಲುಪಿಸಿ ಗೋವುಗಳ ರಕ್ಷಣೆಗೆ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.


ಮಲೆನಾಡು ಪ್ರದೇಶವಾದ ಪಶ್ಚಿಮಘಟ್ಟಗಳ ಸಾಲಿನಲ್ಲಿ ದಿನೇ ದಿನೇ ಮಳೆಯ ಕೊರತೆಯಿಂದ ಹಸಿರು ಕವಚ ನಾಶವಾಗುತ್ತಿದೆ. ಅತಿಯಾದ ವಾಹನ ದಟ್ಟಣೆಯಿಂದ ಶೇ.40 ಪರಿಸರವನ್ನು ಕಳೆದುಕೊಳ್ಳುವ ಜೊತೆಗೆ ಆಮ್ಲಜನಕದ ಕೊರತೆ ಉದ್ಬವಿಸಿದ್ದು ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಸೂಕ್ಷ್ಮ ಪರಿಸರವನ್ನು ಕೊಂಡೊಯ್ಯುವುದು ಕಷ್ಟಸಾಧ್ಯ ಎಂದಿದ್ದಾರೆ.


ಕಾಡನ್ನು ಕಡಿದು ಮರುಭೂಮಿಯನ್ನಾಗಿಸಿರುವುದು ದೊಡ್ಡ ದುರಂತವಾಗಿದೆ. ಕಾಡಿನ ನಾಶದಿಂದ ಹಲವಾರು ವನ್ಯಜೀವಿಗಳು ಆಹಾರವನ್ನಾರಸಿ ನಾಡಿನ ಕೃಷಿ ಬೆಳೆಗಳನ್ನು ನಾಶ ಮಾಡುವ ಸನ್ನಿವೇಶಕ್ಕೆ ಮಾನವ ನಿರ್ಮಿತ ಅಪರಾಧವಾಗಿವೆ. ಇವುಗಳ ನಿವಾರಣೆಗೆ ಬುದ್ದಿವಂತ ಮಾನವ ಹಸಿ ಕವಚದ ಬೆಳವಣಿಗೆಯನ್ನು ಕೈಗೆತ್ತಿಕೊಳ್ಳಬೇಕಾಗಿರುವುದು ಅನಿರ್ವಾಯವಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!