ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿದೆ : ಶ್ರೀ ರಂಭಾಪುರಿ ಜಗದ್ಗುರುಗಳು

0 54

ಎನ್.ಆರ್.ಪುರ: ಮೌಢ್ಯತೆಯ ಮಾರಿ ಮನುಷ್ಯನನ್ನು ಆವರಿಸಿದೆ. ನ್ಯಾಯ ನೀತಿ ಧರ್ಮದ ಅರಿವು ಇಲ್ಲದಂತಾಗಿ ಕವಲು ದಾರಿಯಲ್ಲಿ ಸಿಲುಕಿದ್ದಾನೆ. ನಿಜವಾದ ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಭಾನುವಾರ ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ತಪೋನುಷ್ಠಾನ ಹಾಗೂ ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಲಿಂಗಾಂಗ ಸಾಮರಸ್ಯದ 76ನೇ ಪುಣ್ಯ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ದೊಡ್ಡ ಮನಸ್ಸು ಮತ್ತು ದೊಡ್ಡ ಗುಣಗಳಿಂದ ಸತ್ಕಾರ್ಯಗಳನ್ನು ಮಾಡುವುದರಿಂದ ಮನುಷ್ಯ ದೊಡ್ಡವನೆನಿಸಿಕೊಳ್ಳಲು ಸಾಧ್ಯ. ವಿದ್ಯೆ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ. ಜಗದಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸುವ ಆತ್ಮ ಜ್ಞಾನವೇ ನಿಜವಾದ ವಿದ್ಯೆ. ಒಳ್ಳೆಯ ಮನಸ್ಸಿನಿಂದ ಯೋಚಿಸಿದರೆ ಕೆಟ್ಟವರಲ್ಲೂ ಒಳ್ಳೆತನವನ್ನು ಕಾಣಬಹುದು. ಆದರೆ ಕೆಟ್ಟ ಮನಸ್ಸಿನಿಂದ ಯೋಚಿಸಿದರೆ ಒಳ್ಳೆಯವರಲ್ಲೂ ಕೆಟ್ಟದ್ದೇ ಕಾಣುತ್ತದೆ. ಸುಣ್ಣದ ನೀರು ಹಾಲಿನಂತೆ ಕಂಡರೂ ಅದರ ಒಳಗಿನ ರೂಪ ಬೇರೆಯೇ ಇರುತ್ತದೆ ಎಂಬುದರ ಅರಿವನ್ನು ಭಕ್ತ ಸಂಕುಲಕ್ಕೆ ತಲುಪಿಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸಿದ ಕೀರ್ತಿ ರಾಜಾಧಿರಾಜ ಪೂಜಿತರಾದ ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳಿಗೆ ಸಲ್ಲುತ್ತದೆ. ಶ್ರೀ ರಂಭಾಪುರಿ ಪೀಠದ ಹೆಸರಿನಲ್ಲಿ ಅವರ ಹೆಸರು ಎಂದೆಂದಿಗೂ ಸದಾ ಹಸಿರಾಗಿದೆ. ಅವರ ಆದರ್ಶಗಳನ್ನು ಪರಿಪಾಲಿಸಿ ಮುನ್ನಡೆಯುವುದೇ ನಮ್ಮ ಧ್ಯೇಯವಾಗಿದೆ ಎಂದರು.


ಮಾದನ ಹಿಪ್ಪರಗಿ ಹಿರೇಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮದಲ್ಲಿ ಗುರುವಿಗೆ ಬಹು ದೊಡ್ಡ ಸ್ಥಾನವಿದೆ. ಜಗದ ಜನರ ಅಜ್ಞಾನ ಕಳೆದು ಜ್ಞಾನವನ್ನು ಉಂಟು ಮಾಡುವುದೇ ಗುರು ಧರ್ಮವಾಗಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠದ ನವನಿರ್ಮಾಣ ಶಿಲ್ಪಿ ಲಿಂ.ಶ್ರೀ ಶಿವಾನಂದ ಜಗದ್ಗುರುಗಳು ಬದುಕಿನುದ್ದಕ್ಕೂ ಧರ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದರೆಂದರು.


ಲಿಂ.ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳ ಕ್ರಿಯಾ ಸಮಾಧಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ರಂಭಾಪುರಿ ಜಗದ್ಗುರುಗಳು ಗದ್ದುಗೆಯ ಶಿವಲಿಂಗ ಮೂರ್ತಿಗೆ ಕಿರೀಟ ಧಾರಣೆ ಮಾಡಿ ಗೌರವ ಸಮರ್ಪಿಸಿದರು. ನಂತರ ಲಿಂ.ಶ್ರೀ ಜಗದ್ಗುರು ಶಿವಾನಂದ ವಿದ್ಯಾರ್ಥಿ ನಿಲಯದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಗುಚ್ಛ ಧರಿಸಿ 250 ವಿದ್ಯಾರ್ಥಿಗಳಿಗೆ ಸಮವಸ್ತ್ರ ಕೊಟ್ಟು ಶುಭ ಹಾರೈಸಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ಶ್ರೀಮದ್ರಂಭಾಪುರಿ ಶಿವಾನಂದ ಜಗದ್ಗುರುಗಳ ನುಡಿ ಬಿಂದುಗಳನ್ನು ಒಳಗೊಂಡ “ಮರೆಯಲಾರದ ಮಾಣಿಕ್ಯ” ಎಂಬ ಕಿರು ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.


ಲಿಂ.ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಬೊಗಸೆ ಬಿ.ಎಲ್.ಬೋಜೇಗೌಡರು, ಬೆಳಗೊಳ ಶಿವಶಂಕರ, ಶಿರವಾಸೆ ವಿಶ್ವನಾಥ, ಪ್ರಶಾಂತ ರಿಪ್ಪನ್‌ಪೇಟೆ, ಶಶಿಕುಮಾರ ಸುರಗೀಮಠ, ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ವಿರೂಪಾಕ್ಷ ಶಾಸ್ತ್ರಿ, ಸಿದ್ಧೇಶ್ವರ ಶಾಸ್ತ್ರಿ, ತುಮಕೂರು ಪವನ್ ಕುಮಾರ್, ಲಕ್ಷ್ಮೇಶ್ವರದ ರಾಜಶೇಖರ-ಶಿವಲಿಂಗಯ್ಯ ಹಾಲೇವಾಡಿಮಠ ಸಹೋದರರು ಪಾಲ್ಗೊಂಡು ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಅಬ್ಬಿಗೇರಿ-ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಹಾಗೂ ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದಿಂದ ಅನ್ನದಾಸೋಹ ನೆರವೇರಿತು.


ಗಂಗಾಧರ ಹಿರೇಮಠ ಇವರಿಂದ ಭಕ್ತಿ ಗೀತೆ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

Leave A Reply

Your email address will not be published.

error: Content is protected !!