ನೈಸರ್ಗಿಕ ಅರಣ್ಯ ಬೆಳೆಸುವ ಕೆಲಸ ವ್ಯಾಪಕವಾಗಿ ನಡೆಯಬೇಕು ; ನ್ಯಾಯಾಧೀಶ ಸಿ. ಎಂ. ಜೋಷಿ

0 47


ಹೊಸನಗರ : ಸ್ಥಳೀಯ ಜಾತಿಯ ನೈಸರ್ಗಿಕ ಅರಣ್ಯ ಬೆಳೆಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದ್ದು ಅದನ್ನು ಸಾಂಕ್ರಾಮಿಕಗೊಳಿಸಬೇಕೆಂದು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಧೀಶ ಸಿ.ಎಂ. ಜೋಷಿ ಹೇಳಿದರು.


ಅಂಡಗದೋದೂರು ಗ್ರಾಮಪಂಚಾಯ್ತಿಯಲ್ಲಿ ಸ್ಥಳೀಯ ದೇವಸ್ಥಾನದ ಆವರಣದಲ್ಲಿ ವನ ನಿರ್ಮಾಣವನ್ನು ಗಿಡ ನೆಟ್ಟು ಉದ್ಘಾಟಿಸಿ ಅವರು ಮಾತನಾಡಿ,‌ ದೇಶದಲ್ಲಿ ಅರಣ್ಯದ ಮೇಲಿನ ಆಕ್ರಮಣ ಹೆಚ್ಚಾದ ಪರಿಣಾಮ ಸರ್ವೋಚ್ಛ ನ್ಯಾಯಾಲಯ ಅರಣ್ಯ ರಕ್ಷಣೆಗೆ ಬಿಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ದೇಶವ್ಯಾಪಿ ಪರಿಸ್ಥಿತಿ ಅವಲೋಕಿಸಿ ಆದೇಶಿಸಿದಾಗ ಮಲೆನಾಡಿನ ಕೆಲವು ಭಾಗಗಳಿಗೆ, ಕೆಲವರಿಗೆ ಸ್ವಲ್ಪ ತೊಂದರೆಯು ಆಗಿರಬಹುದು. ಸುನಾಮಿ ಬಂದಾಗ, ಪ್ರಳಯವಾದಗ ಅದು ಒಳ್ಳೆಯವರು, ಕೆಟ್ಟವರೆಂದು ನೋಡದೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತದೆ. ಅಂಡಗದೋದೂರು ಗ್ರಾಮದಲ್ಲಿ ಸಾರ್ವಜನಿಕರಿಂದ ನಿರ್ಮಾಣವಾಗುತ್ತಿರುವ ಅರಣ್ಯ ಶ್ಲಾಘನೀಯ. ಅರಣ್ಯ ರಕ್ಷಣೆಯ ಪ್ರಾಯೋಜಕತ್ವ ಹೊಂದಿರುವ ಬೆಂಗಳೂರಿನ ಉದ್ಯಮಿ ಶ್ರೀಧರ್ ಹಾಗೂ 4-5 ವರ್ಷಗಳಿಂದ ತಮ್ಮ ಜಮೀನಿನ ಸುತ್ತ ಅರಣ್ಯ ಬೆಳೆಸಿ ಸಾರ್ವಜನಿಕವಾಗಿ ಅರಣ್ಯ ಬೆಳೆಸಲು ಕಾರಣಕರ್ತರಾದ ಹೈಕೋರ್ಟ್ ವಕೀಲ ಬಿ. ಎಸ್. ಪ್ರಸಾದ್ ಇವರನ್ನು ಅಭಿನಂದಿಸಿ ಈ ಕಾರ್ಯ ಎಲ್ಲೆಡೆ ಹರಡಲಿ. ಅರಣ್ಯ ಬೆಳೆಸುವ ಕಾಯಕ ವ್ಯಾಪಕಗೊಂಡಾಗ ಮಲೆನಾಡಿನ ಜನರ ಸಮಸ್ಯೆಗೂ ಪರಿಹಾರ ಸಿಗಬಹುದೆಂದರು.


ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಗಿಡ ನೆಟ್ಟು ಮಾತನಾಡಿ, ಇದ್ದ ಜಾಗದಲ್ಲೆಲ್ಲ ಬಗರ್‌ಹುಕುಂ ಮಾಡಿ ಅಡಿಕೆ ಗಿಡ ನೆಡುವ ಈ ಕಾಲದಲ್ಲಿ ಅರಣ್ಯ ಬೆಳೆಸುತ್ತಿರುವ ಪ್ರಸಾದ್ ಕಾರ್ಯ ಶ್ಲಾಘನೀಯ ಎಂದರು.


ಮಂಡಗದ್ದೆ ವಲಯ ಅರಣ್ಯಾಧಿಕಾರಿ ಆದರ್ಶ ಮಾತನಾಡಿ, ಕೃಷಿ ಅರಣ್ಯ ಯೋಜನೆ ಉಪಯೋಗಿಸಿಕೊಂಡು ಅರಣ್ಯ ಬೆಳೆಸಲು ಮುಂದಾಗಬೇಕೆಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಆದರ್ಶ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಾಗವೇಣಮ್ಮ, ಪಿ.ಡಿ.ಒ ಗಣೇಶ್, ವಕೀಲ ಬಿ. ಎಸ್. ಪ್ರಸಾದ್, ವನ ನಿರ್ಮಾಣದ ಪ್ರಾಯೋಜಕ ಶ್ರೀಧರ್, ದೇವಸ್ಥಾನ ಸಮಿತಿ ಅಧ್ಯಕ್ಷ ಲಕ್ಕಪ್ಪಗೌಡ ವೇದಿಕೆಯಲ್ಲಿದ್ದರು. ಸುಮಾ ಸ್ವಾಗತಿಸಿದರು, ಹನಿಯ ರವಿ ನಿರೂಪಿಸಿದರು.

Leave A Reply

Your email address will not be published.

error: Content is protected !!