ರತನಚಂದ ನೇಮಿನಾಥ ಕೋಟಿ ರವರಿಗೆ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

0 187

ರಿಪ್ಪನ್‌ಪೇಟೆ : ಶ್ರೀ ಜೈನ ಮಠದ ವತಿಯಿಂದ ನೀಡುವ 2024ನೇ ಸಾಲಿನ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಜೈನ ಆಗಮ ಗ್ರಂಥಗಳ ಅನುವಾದಕರು, ಸಂಶೋಧಕರು, ಸಂಪಾದಕರು, ರಾಷ್ಟ್ರಪ್ರಶಸ್ತಿ ವಿಭೂಷಿತ ನಿವೃತ್ತ ಶಿಕ್ಷಕರಾದ ಬ್ರ|| ಶ್ರೀ ರತನಚಂದ ನೇಮಿನಾಥ ಕೋಟಿ ಇವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ.

ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ದಿನವಾದ ಮಾ. 31 ಭಾನುವಾರ ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು.

ಇಂಡಿಯಲ್ಲಿ 06-06-1943 ರಂದು ಪದ್ಮಾವತಿ ಹಾಗೂ ನೇಮಿನಾಥ ಕೋಟಿ ದಂಪತಿಗಳಿಗೆ ಜನಿಸಿದ ಇವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಇಂಡಿಯಲ್ಲೇ ಮುಗಿಸಿದರು. ತಂದೆಯವರ ಇಚ್ಛೆಯಂತೆ ಟಿ.ಸಿ.ಎಚ್. ತರಬೇತಿ ಪಡೆದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಜೀವನ ಆರಂಭಿಸಿದರು. ತಮ್ಮ 45ನೇ ವಯಸ್ಸಿನಲ್ಲಿ ಜೈನಾಲಜಿ ವಿಷಯದಲ್ಲಿ ಎಂ.ಎ. ಪದವಿ ಪಡೆದರು.

ಶಿಕ್ಷಕರಾಗಿ ಸೇವೆಯಲ್ಲಿ ಇದ್ದಾಗಲೂ ಸಹ ಧರ್ಮ, ಧ್ಯಾನ ಹಾಗೂ ಶಾಸ್ತ್ರಗಳನ್ನು ಬರೆಯುವ ಜೊತೆಗೆ ಧರ್ಮದ ಪ್ರಚಾರ ಮಾಡುತ್ತಿದ್ದರು. ಸರ್ಕಾರಿ ಸೇವೆಯಲ್ಲಿಯೂ ಶ್ರೇಷ್ಠ ಶಿಕ್ಷಕರೆಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿರುವರು. ಸೇವೆಯಿಂದ ನಿವೃತ್ತರಾದ ಬಳಿಕವೂ ನಿರಂತರ ತಮ್ಮನ್ನು ಸಂಪೂರ್ಣ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ನಿರಂತರ ಅಧ್ಯಯನಶೀಲತೆ ಮತ್ತು ಬರವಣಿಗೆಯ ಸುಪ್ರವೃತ್ತಿಯು ಜೈನ ಸಮುದಾಯಕ್ಕೆ ಹತ್ತು ಹಲವು ಉಪಯುಕ್ತ ಗ್ರಂಥಗಳನ್ನು ದೊರಕಿಸಿಕೊಟ್ಟಿರುತ್ತದೆ. ಜೈನ ಆಗಮ ಅಭ್ಯಾಸಿಗಳಾಗಿರುವ ಇವರು ಧವಲಾ, ಜಯಧವಲ ಹಾಗೂ ಮಹಾಧವಲ ಸಂಪುಟಗಳ ಅನುವಾದ ಮಾಡಿರುತ್ತಾರೆ. ಇದಲ್ಲದೇ ನಂದಗೋಕುಲ, ಪುಣ್ಯಭೂಮಿ ಭಾರತ, ಚಾರಿತ್ರ ಚಕ್ರವರ್ತಿ ಆಚಾರ್ಯ ಶ್ರೀ ಶಾಂತಿಸಾಗರರು, ಭಕ್ತಾಮರಸ್ತೋತ್ರ ಧ್ಯಾನಸೂತ್ರಗಳು, ಧ್ಯಾನವೇ ಧರ್ಮ, ತತ್ವಾರ್ಥಸೂತ್ರ ದೀಪಿಕೆ, ಭಗವಾನ ಪಾರ್ಶ್ವನಾಥ ತೀರ್ಥಂಕರರು, ಹೀಗೆ ಹಲವಾರು ಗ್ರಂಥಗಳನ್ನು ಅನುವಾದ ಮಾಡಿ ಸಂಗ್ರಹಿಸಿ ಹಾಗೂ ಸ್ವತಂತ್ರವಾಗಿ ರಚಿಸಿ ಸಂಪಾದಿಸಿ, ಜಿನವಾಣಿಯ ಪರಮ ಸೇವಕರಾಗಿದ್ದಾರೆ. ಜೈನ ಶ್ರಾವಕ ಸಂಸ್ಕಾರ ಸಿಂಧು ಬೃಹತ್ ಕೃತಿಯಾಗಿದೆ.

ಉತ್ತರ ಭಾರತದಲ್ಲಿಯ ಶ್ರೀಸಿದ್ಧ ಕ್ಷೇತ್ರ ಸಮ್ಮೇದ ಶಿಖರಜಿ, ಚಂಪಾಪುರಿ, ಪಾವಾಪುರಿ, ಗಿರಿನಾರ, ದಕ್ಷಿಣದ ಶ್ರವಣಬೆಳಗೊಳ, ಧರ್ಮಸ್ಥಳ, ಮೂಡಬಿದಿರೆ ಮುಂತಾದ ಕ್ಷೇತ್ರಗಳನ್ನು ಅನೇಕ ಬಾರಿ ಯಾತ್ರೆ ಮಾಡಿ ದರ್ಶನ ಪಡೆದಿದ್ದಾರೆ.

ಕನ್ನಡ ನಾಡಿನಾದ್ಯಂತ ಸಂಚರಿಸಿ ತತ್ವಾರ್ಥ ಸೂತ್ರದ ಶಿಬಿರಗಳು, ಭರತೇಶ ವೈಭವದ ಉಪನ್ಯಾಸ ಮಾಲಿಕೆಗಳನ್ನು ನಡೆಸಿಕೊಟ್ಟಿರುತ್ತಾರೆ. ಅಲ್ಲದೇ ಧಾರ್ಮಿಕ ಪ್ರವಚನಗಳನ್ನು, ದಶಲಕ್ಷಣ ಪರ್ವದ ಉಪನ್ಯಾಸಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಅನೇಕ ಜೈನ ಪತ್ರಿಕೆಗಳಿಗೆ ಮತ್ತು ಸ್ಮರಣ ಸಂಚಿಕೆಗಳಿಗೆ ಮೌಲ್ಯಯುತವಾದ ಲೇಖನಗಳನ್ನು ಬರೆದಿರುತ್ತಾರೆ.

ಇವರ ಈ ಎಲ್ಲಾ ನಿಸ್ವಾರ್ಥ ಸೇವೆ, ಧಾರ್ಮಿಕ ಕಾಳಜಿ, ಸಾಮಾಜಿಕ ಸ್ಪಂದನೆ, ಜಿನವಾಣಿ ಸೇವೆಗಳನ್ನು ಗುರುತಿಸಿದ ಮಠ ಮಾನ್ಯಗಳು, ಸಂಘ ಸಂಸ್ಥೆಯವರು, ಜೈನ ಸಮಾಜಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.

ದಕ್ಷಿಣ ಭಾರತ ಜೈನ ಸಭಾದಿಂದ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ, ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿದ್ಯಾಪೀಠ ಪುರಸ್ಕಾರ, ಧರ್ಮಭೂಷಣ ಪ್ರಶಸ್ತಿ, ಮೂಡಬಿದಿರೆ ಮಠದಿಂದ ಜಿನವಾಣಿ ಪುರಸ್ಕಾರ ಹಾಗೂ ಭಾರತೀಯ ಜೈನ ಮಿಲನ್, ವಲಯ-8 ಇವರಿಂದ ಮಿಲನಶ್ರೀ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

Leave A Reply

Your email address will not be published.

error: Content is protected !!