ಹೊಸನಗರದಲ್ಲಿ ಶಾಸಕರ ಕಚೇರಿ ಆರಂಭ | ಕುಡಿಯುವ ನೀರು, ವಿದ್ಯುತ್ ಪೂರೈಕೆಗೆ ಮೊದಲ ಆದ್ಯತೆ ; ಶಾಸಕ ಗೋಪಾಲಕೃಷ್ಣ ಬೇಳೂರು

0 53

ಹೊಸನಗರ: ಕ್ಷೇತ್ರದ ವಿವಿಧ ಸಮಸ್ಯೆಗಳ ಬಗ್ಗೆ ತಮಗೆ ಅರಿವಿದ್ದು ಕುಡಿಯುವ ನೀರು ಹಾಗೂ ವಿದ್ಯುತ್ ಕಣ್ಣಾಮುಚ್ಚಾಲೆಗೆ  ಶೀಘ್ರ ಇತಿಶ್ರೀ ಹಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಪಟ್ಡಣಕ್ಕೆ ಹೊಂದಿಕೊಂಡಂತೆ ಇರುವ ಕೆಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಚಕ್ರಾ, ಸಾವೆಹಕ್ಕಲು ಡ್ಯಾಂನಿಂದ ನೀರು ತರಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಶಾಸಕರ ನೂತನ ಕಚೇರಿಗೆ ಚಾಲನೆ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಈ ಭಾಗದ ಮಹಿಳೆಯರಿಗೆ ಸಮರ್ಪಕವಾಗಿ ದೊರೆಯದು. ಕಾರಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ವ್ಯವಸ್ಥೆ ಕಡಿಮೆ ಇದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಿ ಎಂಬ ಮಾಧ್ಯಮದವರ ಪ್ರಶ್ನೆಗೆ, ಶೀಘ್ರದಲ್ಲಿ ಕೆಲವು ಸರ್ಕಾರಿ ಬಸ್ ಈ ಭಾಗದಲ್ಲಿ ಓಡಿಸಲು ಕ್ರಮವಹಿಸುತ್ತೇನೆ ಎಂದರು.

ಕೆಂದ್ರ ಸ್ಥಾನದಲ್ಲಿ ಸರ್ಕಾರಿ ಅಧಿಕಾರಿಗಳು ಉಳಿಯದೇ ಇರುವುದು ಜನತೆಗೆ ತೊಂದರೆ ಆಗಿದೆ ಎಂಬ ಪ್ರಶ್ನೆ ಉತ್ತರಿಸಿದ ಶಾಸಕ ಬೇಳೂರು, ಅಂತಹ ಅಧಿಕಾರಿಗಳ ಅವಶ್ಯಕತೆ ನಮಗಿಲ್ಲ. ಅಂಥವರು ಕೂಡಲೇ ವರ್ಗಾವಣೆ ಪಡೆಯಲಿ ಎಂದು ತಾಕೀತು ಮಾಡಿದರು.

ಮರಳು, ಕಲ್ಲು, ಜಲ್ಲಿ ಅಕ್ರಮ ಸಾಗಾಟಕ್ಕೆ ಹಾಗೂ ದರ ನಿಗದಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವೆ ಎಂದರು.

 ಈ ವೇಳೆ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾ.ಪಂ.ಮಾಜಿ ಅಧ್ಯಕ್ಷೆ ಸುಮಾ, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಸುಬ್ರಹ್ಮಣ್ಯ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎರಗಿ ಉಮೇಶ್, ಚಂದ್ರಮೌಳಿ, ಸದಾಶಿವ ಶ್ರೇಷ್ಠಿ, ಪ.ಪಂ.ಅಧ್ಯಕ್ಷ ಹಾಲಗದ್ದೆ ಉಮೇಶ್, ಬೇಕರಿ ಪ್ರವೀಣ್, ನಾಗರಾಜ್ ಕಡೆಕಲ್ಲು, ಅಶ್ವಿನಿ ಕುಮಾರ್, ಜಯನಗರ ಗೋಪಿನಾಥ್, ಸಣ್ಣಕ್ಕಿ ಮಂಜುನಾಥ, ನಿಟ್ಟೂರು ರವೀಶ್, ಖಾದರ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಶಾಸಕರಿಗೆ ಶುಭ ಹಾರೈಸಿದರು.

Leave A Reply

Your email address will not be published.

error: Content is protected !!