Ripponpet | ಸರ್ಕಾರಿ ಶಾಲೆ ಜೀರ್ಣೋದ್ಧಾರಕ್ಕಾಗಿ ಸಮವಸ್ತ್ರ ಕಳಚಿ ಶ್ರಮದಾನಕ್ಕೆ ಮುಂದಾದ ಪೊಲೀಸರು

0 630

ರಿಪ್ಪನ್‌ಪೇಟೆ : ಪಟ್ಟಣದ ಬರುವೆ ಸರ್ಕಾರಿ ಶಾಲಾ ಆವರಣದಲ್ಲಿ ಈಚೆಗೆ ನಡೆದ ಸುಣ್ಣ-ಬಣ್ಣ ಅಭಿಯಾನವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ.

ಹೌದು, ಕಾನೂನು ಸುವ್ಯವಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪಟ್ಟಣದ ಪೊಲೀಸ್ ಸಿಬ್ಬಂದಿಗಳು ಇಂದು ಬೆಳಿಗ್ಗೆ ಠಾಣೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಸಮವಸ್ತ್ರ ಕಳಚಿಟ್ಟು ಏಳು ದಶಕಗಳ ಇತಿಹಾಸವಿರುವ ಸರ್ಕಾರಿ ಶಾಲೆಯ ಪುನರ್ ನವೀಕರಣಕ್ಕಾಗಿ ಶ್ರಮದಾನ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಭಾಜನರಾಗಿದ್ದಾರೆ.

ಪಟ್ಟಣದ ಬರುವೆ ಸರ್ಕಾರಿ ಶಾಲೆಯಲ್ಲಿ ಪೋಸ್ಟ್ ಮ್ಯಾನ್ ಬಳಗ ಆಯೋಜಿಸಿದ್ದ ಸುಣ್ಣಬಣ್ಣ ಅಭಿಯಾನದಡಿಯಲ್ಲಿ ಕತ್ತಿ, ದೊಣ್ಣೆ ಗುದ್ದಲಿಗಳನ್ನು ಹಿಡಿದು ಕಟ್ಟಡ ಕಾರ್ಮಿಕರ ರೀತಿಯಲ್ಲಿ ಗಿಡಗಂಟಿಗಳನ್ನು ಕಡಿದು, ಬಣ್ಣಕ್ಕಾಗಿ ಕಾಂಪೌಡ್ ಶುಚಿಗೊಳಿಸಿ, ಸುತ್ತಮುತ್ತಲಿನ ಕಸವನ್ನು ತೆಗೆದು, ಇಡೀ ಶಾಲಾ ಆವರಣವನ್ನು ಸ್ವಚ್ಚಗೊಳಿಸಿ ಅರ್ಥ ಪೂರ್ಣವಾಗಿ ಗಣರಾಜ್ಯೋತ್ಸವ ಹಬ್ಬವನ್ನು ಆಚರಿಸಿದರು.

ಪೊಲೀಸರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ ಸಾರ್ವಜನಿಕರು ಹಾಗೂ ದಾರಿಹೋಕರು ಇವರ ಕಾರ್ಯವೈಖರಿಯನ್ನು ಗಮನಿಸುತ್ತಾ ಅವರುಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದದ್ದು ಕಂಡುಬಂದಿತು.

ಶ್ರಮದಾನ ನೆರವೇರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಸಡಗರ ಹಾಗೂ ಸಂಭ್ರಮದಿಂದ ಉಪಹಾರವನ್ನು ಬಡಿಸುತಿದ್ದ ದೃಶ್ಯ ರೋಮಾಂಚನಗೊಳಿಸುವಂತಿತ್ತು.

ಪೋಸ್ಟ್ ಮ್ಯಾನ್ ಬಳಗ ಆಯೋಜಿಸಿದ್ದ “ಸರ್ಕಾರಿ ಶಾಲೆ ಅಭಿಮಾನ – ಸುಣ್ಣ ಬಣ್ಣ ಅಭಿಯಾನ” ಕ್ಕೆ ಚಾಲನೆ ನೀಡಿ, ಶ್ರಮದಾನ ನೆರವೇರಿಸಿ ಮಾತನಾಡಿದ ಪಿಎಸ್‌ಐ ಪ್ರವೀಣ್ ಎಸ್ ಪಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಿ ಆ ಮೂಲಕ ಶಾಲೆಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲದೇ ಕೊರಗುತಿದ್ದು ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿ ಜೀವನ ರೂಪಿಸಿಕೊಂಡಿರುವ ಹಳೇ ವಿದ್ಯಾರ್ಥಿಗಳನ್ನು ಸಂಘಟಿಸುವ‌ ಮೂಲಕ ಶಾಲೆಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು ಎಂದು ಹೇಳಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಮಾತನಾಡಿ, ಸುಮಾರು 70 ವರ್ಷಗಳಷ್ಟು ಇತಿಹಾಸವಿರು ಬರುವೆ ಶಾಲೆಯು ಹಲವಾರು ವರ್ಷಗಳಿಂದ ಸುಣ್ಣಬಣ್ಣ ಕಾಣದೇ ಮಂಕಾಗಿತ್ತು, ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಅಭಿಯಾನದಡಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಸುಣ್ಣ ಬಣ್ಣ ಅಭಿಯಾನ ಪ್ರಶಂಸನೀಯ ಹಾಗೂ ಈ ಅಭಿಯಾನಕ್ಕೆ ಕೈ ಜೋಡಿಸಿರುವ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಶ್ರಮದಾನ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಗಣರಾಜ್ಯೋತ್ಸ ಹಬ್ಬವನ್ನು ಆಚರಿಸಿದ್ದಾರೆ ಇವರ ಕಾರ್ಯವೈಖರಿ ಎಲ್ಲಾರಿಗೂ ಮಾದರಿಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವಲ್ಲಿ ಪೋಸ್ಟ್ ಮ್ಯಾನ್ ಸುದ್ದಿ ಬಳಗ ಆಯೋಜಿಸಿರುವ ಸುಣ್ಣಬಣ್ಣ ಅಭಿಯಾನ ಇನ್ನುಳಿದ ಸಂಘಟನೆಗಳಿಗೆ ಪ್ರೇರಣೆಯಾಗಿದೆ.

ರಿಪ್ಪನ್‌ಪೇಟೆ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಂಚಾಯತ್ ವತಿಯಿಂದ ಸಾಕಷ್ಟು ಅನುದಾನವನ್ನು ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸ್ಪಂದಿಸುತ್ತೇವೆ ಎಂದರು.

ಬೆಳಿಗ್ಗೆಯಿಂದಲೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿಗಳು ಶಾಲೆಯ ಸುತ್ತಮುತ್ತಲಿನ ಪರಿಸರ ಸ್ವಚ್ಚಗೊಳಿಸಿ ಹಾಗೂ ಪಾಚಿಗಟ್ಟಿದ್ದ ಕಾಂಪೌಡ್ ಅನ್ನು ಶುದ್ದಗೊಳಿಸಿ ಶ್ರಮದಾನ ನೆರವೇರಿಸಿ ಪೋಸ್ಟ್ ಮ್ಯಾನ್ ಬಳಗಕ್ಕೆ ಠಾಣೆಯ ವತಿಯಿಂದ ಆರ್ಥಿಕ ನೆರವು ನೀಡಿದರು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪೋಸ್ಟ್ ಮ್ಯಾನ್ ಬಳಗದ ರಫ಼ಿ ರಿಪ್ಪನ್‌ಪೇಟೆ, ಸಬಾಸ್ಟಿಯನ್ ತಾಲೂಕ್ ಕಸಾಪ ಅಧ್ಯಕ್ಷ ತ.ಮ. ನರಸಿಂಹ, ಪೊಲೀಸ್ ಎಎಸ್ ಐ ಮಂಜಪ್ಪ, ಜ್ಯೋತಿ ಹಾಗೂ ಸಿಬ್ಬಂದಿಗಳು, ಗ್ರಾಪಂ ಸದಸ್ಯರಾದ ಅಶ್ವಿನಿ ರವಿಶಂಕರ್, ಮಂಜುಳಾ ಕೇತಾರ್ಜಿರಾವ್, ದಾನಮ್ಮ, ದೀಪಾ ಸುಧೀರ್, ಪ್ರಕಾಶ್ ಪಾಲೇಕರ್, ಪೋಸ್ಟ್ ಮ್ಯಾನ್ ಬಳಗದ ಹಸನಬ್ಬ, ಲೇಖನ ಚಂದ್ರನಾಯ್ಕ್, ರಾಘವೇಂದ್ರ ಇಂಜಿನಿಯರ್, ಶ್ರೀಧರ್, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಪ್ರಭಾರಿ ಮುಖ್ಯ ಶಿಕ್ಷಕ ಉಮೇಶ್ ಎಸ್ ಇದ್ದರು.

ಶಿಕ್ಷಕಿ ಅಂಬಿಕಾ ಪ್ರಾರ್ಥಿಸಿದರು. ಶಿಕ್ಷಕಿ ಮೇಘನಾ ನಿರೂಪಿಸಿದರು.

Leave A Reply

Your email address will not be published.

error: Content is protected !!