ಕೋಡೂರು ಗ್ರಾ.ಪಂ. ಕಾಂಗ್ರೆಸ್ ತೆಕ್ಕೆಗೆ !

0 64

ರಿಪ್ಪನ್‌ಪೇಟೆ: ಸಮೀಪದ ಕೋಡೂರ ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಉಮೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸುಧಾಕರ್ ಆಯ್ಕೆಯಾದರು.

ಒಟ್ಟು 13 ಸದಸ್ಯರಲ್ಲಿ ಬಲವುಳ್ಳ ಪಂಚಾಯ್ತಿಯಲ್ಲಿ 9 ಬಿಜೆಪಿ ಬೆಂಬಲಿತ ಸದಸ್ಯರು, 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು ಅಧ್ಯಕ್ಷ ಸ್ಥಾನ ಬಿಸಿಎಂ ‘ಎ’ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ ‘ಬಿ’ ವರ್ಗಕ್ಕೆ ಮೀಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಎಲ್. ಶೇಖರಪ್ಪ, ಉಮೇಶ್ ಹಾಗೂ ಜಯಪ್ರಕಾಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ ‘ಬಿ’ ವರ್ಗದ ಏಕಮಾತ್ರ ಸದಸ್ಯರಿರುವ ಕಾರಣ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುಧಾಕರ್ ನಾಮಪತ್ರ ಸಲ್ಲಿಸಿದ್ದರು. ಕೊನೆ ಗಳಿಗೆಯಲ್ಲಿ ಜಯಪ್ರಕಾಶ್ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಉಮೇಶ್ ಮತ್ತು ಬಿಜೆಪಿ ಬೆಂಬಲಿತ ಸದಸ್ಯ ಶೇಖರಪ್ಪ ಕಣದಲ್ಲಿ ಉಳಿದಿದ್ದು ಮತದಾನದಲ್ಲಿ ಉಮೇಶ್ 8 ಮತ ಪಡೆದರೆ ಶೇಖರಪ್ಪ 5 ಮತ ಪಡೆದರು. 3 ಮತಗಳ ಅಂತರದಿಂದ ಅಧ್ಯಕ್ಷರಾಗಿ ಉಮೇಶ್ ಜಯಭೇರಿ ಬಾರಿಸಿದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುಧಾಕರ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಹೊಸನಗರ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ ನಾಗರಾಜ್ ಭಾಗವಹಿಸಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾಗರಾಜ್ ಸಹಕರಿಸಿದರು.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಕಳೆದ ಮೊದಲ ಅವಧಿಯಲ್ಲಿ ಗ್ರಾಮಾಡಳಿತದ ಅಧಿಕಾರ ಬಿಜೆಪಿ ಪಾಲಾಗಿದ್ದು ಈಗ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ ಇದರಿಂದಾಗಿ ಬಿಜೆಪಿಗೆ ಮುಖಭಂಗವಾದಂತಾಗಿದೆ ಅಲ್ಲದೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಕಸಬಾ ಹೋಬಳಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಇಲ್ಲಿನ ವಿಶೇಷವಾಗಿದೆ.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾ.ಪಂ ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿ, ಗ್ರಾ.ಪಂ ಸದಸ್ಯರು, ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.

Leave A Reply

Your email address will not be published.

error: Content is protected !!