ಕಾನು ಅರಣ್ಯ ಉಳಿಸಲು ಅಗತ್ಯ ಕ್ರಮವಹಿಸಿ ; ವೃಕ್ಷಲಕ್ಷ ಆಂದೋಲನದಿಂದ ತಹಸೀಲ್ದಾರ್‌ಗೆ ಮನವಿ

0 381

ಹೊಸನಗರ : ತಾಲೂಕಿನ ನಗರ ಹೋಬಳಿಯ ಕಟ್ಟೆಕೊಪ್ಪದ ಕಂದಾಯ ಭೂಮಿಯ ಅರಣ್ಯ ಖಾಸಗಿಯವರ ಪಾಲಾಗದಂತೆ ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದ ಅವರು, ನಾಲ್ಕಾಣೆ ಕಾನು, ಒಂದಾಣೆ ಕಾನು ಎಂದು ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವರಿಗೆ ಬಿಡಲಾಗಿತ್ತು. ಆದರೆ ಅದನ್ನೇ ಇಂದು ಹಕ್ಕು ಚಲಾಯಿಸಲು ಹೊರಟಿದ್ದಾರೆ. ನೂರಾರು ಎಕರೆ ಭೂಪ್ರದೇಶ ಹೇಗೆ ಏಕವ್ಯಕ್ತಿಗೆ ಮಂಜೂರು ಮಾಡಲು ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ಪಶ್ಚಿಮಘಟ್ಟದ ದಟ್ಟ ಕಾಡು ಇರುವ ಜಾಗವಾಗಿದ್ದು, ಇದನ್ನೇ ಖಾಸಗಿ ವ್ಯಕ್ತಿಗಳಿಗೆ ಪಹಣೆ ಮಾಡಲಾಗಿದೆ. ನಗರ ಹೋಬಳಿಯ ಕಟ್ಟೆಕೊಪ್ಪದಲ್ಲಿ ಸುಮಾರು 250 ಎಕರೆ ಜಾಗದ ಕುರಿತು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಕೋರ್ಟ್ ಸಹಾ ಖಾತೆದಾರರ ಪರವಾದ ಆದೇಶ ನೀಡಿದೆ. ಇದೇ ಗ್ರಾಮದ ಸಮೀಪದಲ್ಲಿ ಇಂತಹದೇ ಇನ್ನೂ ಕೆಲವು ಪ್ರಕರಣಗಳಿವೆ. ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅರಣ್ಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ರಶ್ಮಿ ಹಾಲೇಶ್, ಕಾನೂನಿನ ಪರಿಧಿಯಲ್ಲಿ ತಾವು ಕೆಲಸ ಮಾಡಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಆಂದೋಲನದ ಪ್ರಮುಖರಾದ ಕವಲಕೋಡು ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಹನಿಯ ರವಿ, ಚಕ್ರವಾಕ ಸುಬ್ರಮಣ್ಯ, ಸಂಪೆಕಟ್ಟೆ ಕುಮಾರ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!